ಕಾಸರಗೋಡು, ನ 04 (DaijiworldNews/SM): ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನವಂಬರ್ 20ರಂದು ಕಾಸರಗೋಡು ಖಾಸಗಿ ಬಸ್ಸು ಮಾಲಕರು ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಸಾರಿಗೆ ನೀತಿಯನ್ನು ಜಾರಿಗೆ ತರಬೇಕು, ವಿದ್ಯಾರ್ಥಿಗಳ ರಿಯಾಯಿತಿ ದರವನ್ನು ಹೆಚ್ಚಳಗೊಳಿಸಬೇಕು, ಖಾಸಗಿ ಬಸ್ಸುಗಳಂತೆ ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲೂ ವಿದ್ಯಾರ್ಥಿಗಳಿಗೆ ರಿಯಾಯಿತಿ ಒದಗಿಸಬೇಕು ಎಂದು ಒತ್ತಾಯಿಸಿದರು. ಕೇರಳದಲ್ಲಿ ಖಾಸಗಿ ಬಸ್ಸು ವಲಯ ಅಧಪತನದತ್ತ ಸಾಗುತ್ತಿದೆ. ಉದ್ಯಮ ಭಾರೀ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಬಿಡಿಭಾಗಗಳ ಬೆಲೆ ದಿನ ಕಳೆದಂತೆ ಏಕಾಏಕಿ ಏರಿಕೆಯಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವಿಮೆ ಶೇಕಡಾ 65 ರಷ್ಟು ಹೆಚ್ಚಳವಾಗಿದೆ.
2018 ರಲ್ಲಿ ಪ್ರಯಾಣ ದರ ಏರಿಕೆ ಮಾಡಿದಾಗ ಒಂದು ಲೀಟರ್ ಡೀಸೆಲ್ ಗೆ 64 ರೂಪಾಯಿ ಇದ್ದರೆ, ಪ್ರಸ್ತುತ 74 ರೂಪಾಯಿಗೆ ತಲುಪಿದೆ. 2011 ರಲ್ಲಿ 34 ಸಾವಿರದಷ್ಟು ಖಾಸಗಿ ಬಸ್ಸುಗಳಿದ್ದರೆ , ಪ್ರಸ್ತುತ 12,500ಕ್ಕೆ ಇಳಿಕೆಯಾಗಿದೆ. ಖಾಸಗಿ ವಾಹನಗಳ ಹೆಚ್ಚಳದಿಂದ ಬಸ್ಸು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ ಎಂದು ಹೇಳಿದರು.
ಮುಷ್ಕರದ ಪೂರ್ವಭಾವಿಯಾಗಿ ನವಂಬರ್ ಆರರಂದು ಬೆಳಿಗ್ಗೆ 10.30ರಿಂದ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಜಾಥಾ ಹಾಗೂ ಬಳಿಕ ವಿದ್ಯಾನಗರ ಬಿ. ಸಿ ರೋಡ್ ನಲ್ಲಿ ಧರಣಿ ನಡೆಯಲಿದೆ. ನವಂಬರ್ 13ರಂದು ತಿರುವನಂತಪುರದ ರಾಜ್ ಭವನ್ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.