ಮಂಗಳೂರು, ನ 05 (Daijiworld News/MB) : ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ 60 ಅಭ್ಯರ್ಥಿಗಳನ್ನು ಕಣಕಿಳಿಸಿದ್ದರೆ, ಬಿಜೆಪಿ ಪಕ್ಷವು 90 ಅಭ್ಯರ್ಥಿಗಳನ್ನು ಕಣಕಿಳಿಸಿ ಮತವನ್ನು ವಿಭಜನೆ ಮಾಡುವ ಷಡ್ಯಂತ್ರ ರಚಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ದೂರಿದ್ದಾರೆ.
ನಗರ ಕಾಂಗ್ರೆಸ್ ಕಚೇರಿಯಲ್ಲಿ ನ. 5 ರ ಮಂಗಳವಾರ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತಾನಾಡಿದ ಅವರು, ಇನ್ನೂ ಕೆಲವು ಪ್ರದೇಶದಲ್ಲಿ ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಗಳಲ್ಲದೆ ಪಕ್ಷೇತರ ಅಭ್ಯರ್ಥಿಗಳನ್ನು ಕಣಕಿಳಿಸಿ ಅಲ್ಪಸಂಖ್ಯಾತರ ಮತವನ್ನು ವಿಭಜನೆ ಮಾಡುವ ತಂತ್ರ ರಚಿಸಿದ್ದು ಈ ಕುರಿತು ಮತದಾರರು ಜಾಗೃತರಾಗಬೇಕು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ದರ ಏರಿಕೆಯ ಕುರಿತು ಮಾತಾನಾಡಿದ ಅವರು ‘ನಾವು ಆಡಳಿತದಲ್ಲಿ ಇದ್ದಾಗ ನೀರಿನ ದರ ಏರಿಕೆಯನ್ನು ವಿರೋದ ಮಾಡಿದ್ದೇವೆ. ಆದರೆ ಈಗ ಮಹಾನಗರಪಾಲಿಕೆ ನೀರಿನ ದರ ಏಕಾಏಕಿ ಹೆಚ್ಚಿಸಿದೆ. ನೀರಿನ ದರ ಹೆಚ್ಚಳ ಆಗಲು ಶಾಸಕ ಡಿ. ವೇದವ್ಯಾಸ್ ಕಾಮತ್ ಹಾಗೂ ಡಾ. ವೈ ಭರತ್ ಶೆಟ್ಟಿ ನೇರ ಹೊಣೆಯಾಗಿದ್ದಾರೆ. ಆದರೆ ಈಗ ಕಾಂಗ್ರೆಸ್ ನೀರಿನ ದರ ಹೆಚ್ಚಿಸಿದೆ ಎಂದು ಅವರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಾರೆ. ಅವರಲ್ಲಿ ಈ ಬಗ್ಗೆ ಸಾಕ್ಷಿ ಇದ್ದರೆ ನೀಡಲಿ. ಇಲ್ಲದಿದ್ದರೆ ತಮ್ಮ ಸೋಲನ್ನು ಒಪ್ಪಲಿ’ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪರವರ ವೈರಲ್ ಆದ ವಿಡಿಯೋ ಕುರಿತು ಮಾತಾನಾಡಿದ ಅವರು ‘ಈ ವಿಡಿಯೋದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರವನ್ನು ಕೆಳಗುರುಳಿಸಲು ಅರ್ನಹ ಶಾಸಕರಿಗೆ ಬೇಕಾದ ವ್ಯವಸ್ಥೆ ಮಾಡಿದ್ದರು ಎಂದು ಯಡಿಯೂರಪ್ಪರವರು ಒಪ್ಪಿಕೊಂಡಿದ್ದಾರೆ. ಇದು ನಮ್ಮ ಕಾನೂನಿಗೆ ಮಾಡುವ ದಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು. ಆದ್ದರಿಂದ ಈಗಲೇ ತಮ್ಮ ಸ್ಥಾನಕ್ಕೆ ಯಡಿಯೂರಪ್ಪ ಹಾಗೂ ಅಮಿತ್ ಶಾ ರಾಜೀನಾಮೆ ನೀಡಬೇಕು. ಅವರಿಗೆ ತಮ್ಮ ಸ್ಥಾನದಲ್ಲಿರುವ ಯಾವ ನೈತಿಕತೆಯು ಇಲ್ಲ’ ಎಂದು ತಿಳಿಸಿದರು.