ಉಡುಪಿ, ನ.05 (DaijiworldNews/SM): ರಾ.ಹೆ. ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದು, ಟೋಲ್ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ. ಪಡುಬಿದ್ರೆ ಫ್ಲೈಓವರ್ ಜುಲೈ 15 ಹಾಗೂ ಕುಂದಾಪುರ ಫ್ಲೈಓವರ್ ಕೆಲಸ ಮಾ.15ರೊಳಗೆ ಮುಗಿಯಬೇಕು. ಜಿಲ್ಲಾಡಳಿತ ನೀಡಿದ ಅವಧಿಯಲ್ಲಿ ಕಾಮಗಾರಿ ಮುಗಿಸುವಲ್ಲಿ ಸಂಸ್ಥೆ ವಿಫಲವಾದರೆ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಪತ್ರಕರ್ತರ ಭವನದಲ್ಲಿ ಆಯೋಜಿದ್ದ ಜಿಲ್ಲಾ ಪತ್ರಕರ್ತರು ಹಾಗೂ ಜಿಲ್ಕಾಧಿಕಾರಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿಗದಿತ ಸಮಯದ ಮಿತಿಯೊಳಗೆ ಪಡುಬಿದ್ರೆ ಬ್ರಿಡ್ಜ್ ಹಾಗೂ ಕುಂದಾಪುರ ಫ್ಲೈ ಓವರ್ ನಿರ್ಮಾಣವಾಗದೆ ಇದ್ದರೆ ಗುತ್ತಿಗೆ ಪಡೆದ ನವಯುಗ ಸಂಸ್ಥೆಯನ್ನು ಕಾಮಗಾರಿಯಿಂದ ವಜಾಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಉಡುಪಿ ಜಿಲ್ಲೆಯ ಮೂಲಕ ಹಾದುಹೋಗುವ ರಾ.ಹೆ. 66ರಲ್ಲಿನ ಅಪಘಾತ ವಲಯ, ಬೀದಿ ದೀಪ, ಚರಂಡಿ ವ್ಯವಸ್ಥೆ ಬಗ್ಗೆ ವರದಿಯನ್ನು ನೀಡಿದ್ದಾರೆ. ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಗುತ್ತಿಗೆ ಸಂಸ್ಥೆಗೆ ನೀಡಲಾಗಿದೆ. ಅದನ್ನು ಪರಿಷ್ಕರಿಸಿ ಬದಲಾವಣೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.