ಕೊಚ್ಚಿ , ಜ 09: ಇಲ್ಲಿನ ಕುಂಬಳಂ ಸಮೀಪದ ಕೆರೆಯಲ್ಲಿ ತೇಲುತ್ತಿದ್ದ ಬ್ಯಾರಲ್ ನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಕೆರೆಯಲ್ಲಿ ಬ್ಯಾರೆಲ್ ಸುಮಾರು ಒಂದು ವರ್ಷದಿಂದ ತೇಲುತ್ತಿದ್ದು ಯಾರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹಡಗಿನಲ್ಲಿ ಬಳಸಿ ಬಿಸಾಕಿದ ತೈಲ ಬ್ಯಾರಲ್ ಇರಬೇಕೆಂದು ಎಲ್ಲರು ಊಹಿಸಿಕೊಂಡಿದ್ದರು. ಆದರೆ ಸುಮಾರು 2 ತಿಂಗಳ ಹಿಂದೆ ಕೆರೆಯನ್ನು ಸ್ವಚ್ಚಗೊಳಿಸುವ ವೇಳೆ ಈ ಬ್ಯಾರೆಲ್ ನ್ನು ದಡಕ್ಕೆ ತರಲಾಗಿತ್ತು. ಆದರೆ ಬ್ಯಾರಲ್ ಗೆ ವಿಪರೀತ ಇರುವೆ ಮುತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಬ್ಯಾರೆಲ್ ಒಡೆದು ನೋಡಿದಾಗ ಶಾಕ್ ಕಾದಿತ್ತು. ಎರಡು ಬದಿಯಲ್ಲಿ ಕಾಂಕ್ರೀಟ್ ತುಂಬಿದ್ದು ಮದ್ಯಭಾಗದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ದೇಹದಲ್ಲಿ ಕೂದಲು ಅಸ್ಥಿಪಂಜರ, ಬಟ್ಟೆ ಮತ್ತು ಬೆಳ್ಳಿಯ ಸೊಂಟಪಟ್ಟಿ ಬಿಟ್ಟರೆ ಬೇರೇನೂ ಉಳಿದಿಲ್ಲ. ಇದು ಸುಮಾರು 30 ವರ್ಷ ವಯಸ್ಸಿನ ಮಹಿಳೆಯ ಶವ ಇರಬೇಕೆಂದು ಶಂಕಿಸಲಾಗಿದ್ದು, ಕನಿಷ್ಟ ಒಂದು ವರ್ಷ ಹಿಂದಿನದು ಎಂದು ವಿಧಿ ವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯ ಕೈ ಕಾಲು ಕಟ್ಟಿ ಬ್ಯಾರೆಲ್ ಒಳಗೆ ತುಂಬಲಾಗಿದ್ದು, ವೃತ್ತಿಪರ ಹಂತಕರು ಈ ಹತ್ಯೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪರಿಶೀಲಿಸಿ ದೇಹ ಗುರುತು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.