ಉಡುಪಿ, ನ 06 (DaijiworldNews/SM): ದೇವೇಗೌಡ ಯುಡಿಯೂರಪ್ಪ ಟೆಲಿಫೋನ್ ಮಾತುಕತೆ ವಿಚಾರದ ಬಗ್ಗೆ ನನಗೇನು ತಿಳಿದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಬಗ್ಗೆ ಗೊತ್ತಿಲ್ಲದೆ ನಾನು ಏನು ಮಾತಾಡಲ್ಲ ಎಂದರು.
ಇನ್ನು ಮೈತ್ರಿ ಸರಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂಬ ದೇವೇಗೌಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಸರಕಾರ ಬೀಳೋಕೆ ಯಾರು ಕಾರಣ ಅನ್ನೋದಿಕ್ಕೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ದೇವೇಗೌಡ್ರು ಆರೋಪ ಮಾಡಿದಷ್ಟೂ ಸಲ ನಾನು ಉತ್ತರ ಕೊಡೋದಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಸರಕಾರ ಬೀಳಲು ಯಾರು ಕಾರಣ ಎನ್ನುವುದಕ್ಕೆ ಈಗಾಗಲೇ ಸುದೀರ್ಘ ಉತ್ತರವನ್ನು ನಾನು ಕೊಟ್ಟಿದ್ದೇನೆ. ಉಪಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಒಳ ಒಪ್ಪಂದ ಮಾಡಿಕೊಳ್ಳುತ್ತಾ ಎಂಬುವುದು ನನಗೆ ಗೊತ್ತಿಲ್ಲ. ಇವರ ಒಳ ಒಪ್ಪಂದದ ಬಗ್ಗೆ ನಾನು ಏನೂ ಹೇಳುವುದಿಲ್ಲ.
ಈ ಬಗ್ಗೆ ದೇವೇಗೌಡ ಯುಡಿಯೂರಪ್ಪ ಸಿಕ್ಕಿದ್ರೆ ಅವರನ್ನೇ ಕೇಳಿ ಎಂದು ಗುಡುಗಿದ್ದಾರೆ. ನಾನೂ ಸಾಕಷ್ಟು ಊಹಾ ಪೋಹ ಗಳನ್ನು ಕೇಳುತ್ತಿದ್ದೇನೆ. ಊಹಾಪೋಹಾಗಳಿಗೆ ನಾನು ಉತ್ತರಿಸುವುದಿಲ್ಲ ಎಂದಿದ್ದಾರೆ.
ಇನ್ನು ಯುಡಿಯೂರಪ್ಪ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಯುಡಿಯೂರಪ್ಪ ಅವರೇ ಆಡಿಯೋ ತನ್ನದು ಎಂದು ಒಪ್ಕೊಂಡಿದ್ದಾರೆ. ಅವರು ದಿನಕ್ಕೊಂದು ಹೇಳಿಕೆ ಕೊಟ್ರೆ ಯಾವುದನ್ನು ನಂಬೋದು? ಈ ಪ್ರಕರಣ ಈಗಾಗಲೇ ಸುಪ್ರೀಂ ಮೆಟ್ಟಲೇರಿದೆ. ನಮ್ಮ ಲಾಯರ್ ಇವತ್ತು ವಾದವನ್ನೂ ಮಂಡಿಸಿದ್ದಾರೆ. ಅಮಿತ್ ಶಾ ಕುಮ್ಮಕ್ಕು ಬಹಿರಂಗವಾಗಿದೆ.ಗೃಹ ಸಚಿವರೇ ಹೀಗೆ ಮಾಡಿದ್ರೆ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತಾ ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಕಾಂಗ್ರೆಸ್ ನ ಶನಿ ಎಂಬ ಜನಾರ್ಧನ ಪೂಜಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ನೋ ರಿಯಾಕ್ಷನ್ ಟು ಮಿಸ್ಟರ್ ಜನಾರ್ಧನ್ ಪೂಜಾರಿ ಎಂದರು.