ವಿಟ್ಲ, ನ 6 (Daijiworld/MB): ಒಂದು ತಿಂಗಳು ಶಾಲೆಗೆ ಹೋಗದೆ ತರಗತಿಗೆ ಚಕ್ಕರ್ ಹಾಕುತ್ತಿದ್ದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಹೋಗುವಂತೆ ಮನ ಪರಿವರ್ತನೆ ಮಾಡಿ ಮತ್ತೆ ಶಾಲೆಗೆ ಹೋಗುವಂತೆ ಮಾಡುವಲ್ಲಿ ವಿಟ್ಲ ಠಾಣೆಯ ಬೀಟ್ ಪೊಲೀಸ್ ಸಿಬ್ಬಂದಿ ಬಾಲಕೃಷ್ಣ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳೂ ಸುಮಾರು ಒಂದು ತಿಂಗಳಿಂದ ಶಾಲೆಗೆ ಹಾಜರಾಗಿರಲಿಲ್ಲ. ಮಕ್ಕಳನ್ನು ಶಾಲೆಗೆ ಬರುವಂತೆ ಪ್ರೇರೆಪಿಸಬೇಕೆಂದು ಅಂದುಕೊಂಡ ಶಾಲಾ ಶಿಕ್ಷಕರು ಶ್ರೀಪತಿ ನಾಯಕ್ ಮತ್ತು ಪ್ರವೀಣ್ ಕುಮಾರ್ ಬೀಟ್ ಪೊಲೀಸ್ ಸಿಬ್ಬಂದಿ ಬಾಲಕೃಷ್ಣರವರ ಬಳಿ ಸಹಾಯ ಕೇಳಿದ್ದಾರೆ.
ಇಡ್ಕಿದು ಗ್ರಾಮದ ಕೋಲ್ಪೆ ನಿವಾಸಿಗಳಾದ ಶ್ರವಣ್ ಕುಮಾರ್ 7ನೇ ತರಗತಿಯಲ್ಲಿ ಹಾಗೂ ನಮಿತಾ ಕೋಲ್ಪೆ 3ನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳು. ಇವರ ತಂದೆ ಗೋಪಾಲಕೃಷ್ಣ ಹಾಗೂ ತಾಯಿ ಸುಂದರಿ ಕೂಲಿ ಕಾರ್ಮಿಕರಾಗಿದ್ದು ಮಕ್ಕಳನ್ನು ಶಾಲೆಗೆ ಹೋಗಲು ಹೇಳುವ ಗೋಜಿಗೆ ಹೋಗಲಿಲ್ಲ.
ಶಿಕ್ಷಕರೊಂದಿಗೆ ವಿದ್ಯಾರ್ಥಿಗಳ ಮನೆಗೆ ತೆರಳಿದ ಪೊಲೀಸ್ ಬಾಲಕೃಷ್ಣ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣದ ಮಹತ್ವದ ಕುರಿತು ಮನವರಿಕೆ ಮಾಡಿಸಿ, ವಿದ್ಯಾರ್ಥಿಗಳು ಮರಳಿ ಶಾಲೆಗೆ ಹೋಗುವಂತೆ ಮಾಡಿದ್ದಾರೆ.