ಮಂಗಳೂರು, ನ 06 (Daijiworld News/MSP): ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ಏಲಂ ಕುರಿತ ಪ್ರಕರಣ ಹೈಕೋರ್ಟ್ ನಲ್ಲಿರುವ ನಡುವೆಯೇ ಮೇಳಗಳ ತಿರುಗಾಟಕ್ಕೆ ಸಿದ್ಧತೆ ಅಂತಿಮಗೊಂಡಿದೆ. ಹೀಗಾಗಿ ಈ ಬಾರಿಯೂ ಖಾಸಗಿ ಯಜಮಾನಿಕೆಯಲ್ಲೇ ಹಿಂದಿನಂತೆ ತಿರುಗಾಟ ನಡೆಸುವ ಮುನ್ಸೂಚನೆ ಸಿಕ್ಕಂತಾಗಿದೆ. ಇದು ಬಂಡೆದ್ದ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಟೀಲು ಮೇಳವನ್ನು ಏಲಂ ನಡೆಸುವಂತೆ ಬಂಡೆದ್ದ ಕಲಾವಿದರು ಪಟ್ಟು ಹಿಡಿದಿದ್ದಾರೆ.
ಕಟೀಲು ಮೇಳದ ಏಲಂ ಕುರಿತಂತೆ ಹೈಕೋರ್ಟ್ನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ಇವೆ. ಇವುಗಳ ಪೈಕಿ ಒಂದು ಪ್ರಕರಣದಲ್ಲಿ ಏಲಂ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಈ ನಡುವೆ ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ ಅವರು ಅ.30 ರಂದು ಏಲಂ ಆದೇಶ ಹೊರಡಿಸಿದ್ದರೂ, ಮೊದಲಿನ ಪ್ರಕರಣದಲ್ಲಿ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ತಡೆಯಾಜ್ಞೆ ನೀಡಿರುವುದರಿಂದ ನೇರವಾಗಿ ದ.ಕ. ಜಿಲ್ಲಾಡಳಿತಕ್ಕೆ ಆದೇಶವನ್ನು ರವಾನಿಸದೆ ಹೈಕೋರ್ಟ್ಗೆ ಆದೇಶದ ಪ್ರತಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮೇಳ ಹರಾಜು ನಡೆಸದಿದ್ದರೆ ಹಾಲಿ ವ್ಯವಸ್ಥೆಯಲ್ಲೇ ಬಿಟ್ಟರೇ ಈ ಬಾರಿಯೂ ಸರಕಾರಕ್ಕೆ ನಷ್ಟ ಉಂಟಾಗಲಿದೆ ಎಂಬ ಅಭಿಪ್ರಾಯವನ್ನು ಮುಜರಾಯಿ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು ತ್ವರಿತ ವಿಚಾರಣೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಇನ್ನೊಂದು ಪ್ರತಿ ಕಾನೂನು ಸಲಹೆಗಾರರಿಗೂ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನ. ೮ ರಂದು ಏಲಂ ತಡೆಯಾಜ್ಞೆ ಪ್ರಕರಣದ ಕುರಿತು ಹೈಕೋರ್ಟ್ ನಲ್ಲಿ ಮುಂದಿನ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಈ ನಡುವೆ ಕಟೀಲು ನ.೨೨ ರಿಂದ ಕಟೀಲಿನಲ್ಲಿ ಸೇವೆಯಾಟದ ತಿರುಗಾಟ ಪ್ರಾರಂಭವಾಗಲಿದೆ ಎಂದು ಕಟೀಲು ದೇವಸ್ಥಾನದ ಯಕ್ಷಪ್ರಭಾ ಪತ್ರಿಕೆ ತಿಳಿಸಿದೆ. ಇದರಿಂದ ಅಸಮಾಧಾನಗೊಂಡಿರುವ ಬಂಡಾಯ ಕಲಾವಿದರು ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.