Karavali
ಫಾ| ಮಹೇಶ್ ಆತ್ಮಹತ್ಯೆ ಪ್ರಕರಣ - ಶಿರ್ವ ಧರ್ಮಕೇಂದ್ರ ಒಡೆದ ಮನೆಯಾಗಿದೆಯೇ .?
- Wed, Nov 06 2019 03:27:33 PM
-
ವಿಶೇಷ ಪ್ರತಿನಿಧಿ - ದಾಯ್ಜಿವರ್ಲ್ಡ್ ಉಡುಪಿ
ಮಂಗಳೂರು, ನ 06 (Daijiworld News): ಶಿರ್ವ ಡಾನ್ ಬೋಸ್ಕೊ ಶಾಲೆಯ ಪ್ರಾಂಶುಪಾಲರು ಹಾಗೂ ಶಿರ್ವ ಇಗರ್ಜಿಯ ಧರ್ಮಗುರುಗಳಾದ ಫಾ.ಮಹೇಶ್ ಆತ್ಮಹತ್ಯೆ ಪ್ರಕರಣವು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದು ದಿನಕ್ಕೊಂದರಂತೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ.
ಕಳೆದ ನವೆಂಬರ್ 2 ರಂದು ಶಿರ್ವ ಇಗರ್ಜಿಯಲ್ಲಿ ಕಥೋಲಿಕ ಕ್ರೈಸ್ತ ಸಂಪ್ರದಾಯದ ಪ್ರಕಾರ ಅಗಲಿದ ಆತ್ಮಗಳಿಗೆ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನಾ ಕೂಟ ನಡೆದಿತ್ತು. ಇದರ ನಂತರ ಏಕಾಏಕಿ ನೆರೆದ ಗುಂಪೊಂದು ಧರ್ಮಗುರುಗಳ ಕಚೇರಿ ಮುಂದೆ ನಿಂತು ಫಾ.ಮಹೇಶ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದರು.
ಪೋಲಿಸ್ ಇಲಾಖೆಯ ಪ್ರಾಥಮಿಕ ವರದಿ ಪ್ರಕಾರ ಫಾ.ಮಹೇಶ್ ಅವರು ಅಕ್ಟೋಬರ್ 11 ರಂದು ರಾತ್ರಿ ಡಾನ್ ಬೋಸ್ಕೊ ಶಾಲೆಯಲ್ಲಿರುವ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವರದಿಯನ್ನು ಉಲ್ಲೇಖಿಸಿ ಇಗರ್ಜಿಯ ಪ್ರಧಾನ ಧರ್ಮಗುರುಗಳು ಪ್ರತಿಭಟನಾಕಾರರಿಗೆ ಸೂಕ್ತ ಸಮಜಾಯಿಷಿ ನೀಡಿದ್ದರು. ಇದರ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಅಹಿತಕರ ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ಧರ್ಮಗುರುಗಳು ಮುಂಜಾಗ್ರತಾ ಕ್ರಮವಾಗಿ ಪೋಲಿಸರಿಗೆ ಮಾಹಿತಿ ನೀಡಿದ್ದರು. ಇನ್ನೊಂದೆಡೆ ಪ್ರತಿಭಟನೆಯ ಕಾವು ಏರತೊಡಗಿದ್ದಂತೆ ಅನಿವಾರ್ಯವಾಗಿ ಪೋಲಿಸರು ಮಧ್ಯೆಪ್ರವೇಶಿಸಿದ್ದರು.
ಆದರೆ ಪೋಲಿಸರ ಮಧ್ಯಸ್ಥಿಕೆಗೆ ಜಗ್ಗದ ಪ್ರತಿಭಟನಾಕಾರರು ಉಡುಪಿ ಧರ್ಮಪ್ರಾಂತ್ಯದ ಭಿಷಪ್ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿದ್ದರು ಹಾಗೂ ಪೋಲಿಸರ ಮಧ್ಯಪ್ರವೇಶವನ್ನು ಪ್ರಶ್ನಿಸಿದ್ದರು. ಪ್ರತಿಭಟನಾಕಾರರಲ್ಲಿ ಕೆಲವರು ಇಗರ್ಜಿಯ ನೂರು ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಗರ್ಜಿ ಆವರಣದೊಳಗೆ ಪೋಲಿಸರು ಕಾಲಿಡುವಂತಾಯಿತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಸಂದರ್ಭ ಪೋಲಿಸರು “ಅಕ್ರೋಶಿತ ಪ್ರತಿಭಟನಾಕಾರರ ಪೈಕಿ ಯಾರಾದರೂ ಪ್ರಧಾನ ಧರ್ಮಗುರುಗಳ ಮೇಲೆ ಹಲ್ಲೆಗೆ ಮುಂದಾದರೆ ಯಾರು ಜವಾಬ್ದಾರರು?” ಎಂದು ಪ್ರತಿಭಟನಾಕಾರರಿಗೆ ತಿಳಿಹೇಳಿದ್ದರು.
ಮರುದಿನವೂ ಪ್ರತಿಭಟನೆ ಮುಂದುವರೆದಾಗ ಮೊದಲಿನ ದಿನ ನೀಡಿದ ಭರವಸೆಯಂತೆ ಉಡುಪಿ ಬಿಷಪ್ ಸ್ಥಳಕ್ಕೆ ಭೇಟಿ ನೀಡಿದ್ದರಾದರೂ ಪ್ರತಿಭಟನಾಕಾರರ ಗುಂಪು ಅವರನ್ನು ಗಣನೆಗೆ ತೆಗೆದುಕೊಳ್ಳದೆ ಪ್ರತಿಭಟನೆ ಮುಂದುವರೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಗಮನಿಸಿದ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಸಫಲರಾಗಿದ್ದರು. “ಫಾ.ಮಹೇಶ್ ಕುಟುಂಬಸ್ಥರು ಇದೊಂದು ಆತ್ಮಹತ್ಯೆ ಪ್ರಕರಣವಾದ ಕಾರಣ ಪೋಲಿಸ್ ಹಾಗೂ ಧರ್ಮಪ್ರಾಂತ್ಯದ ಅಧಿಕಾರಿಗಳಲ್ಲಿ ಹೆಚ್ಚಿನ ತನಿಖೆ ಅಗತ್ಯವಿಲ್ಲ" ಎಂಬ ಕೇಳಿಕೆ ನೀಡಿರುವುದನ್ನು ಪ್ರತಿಭಟನಾಕಾರರ ಗಮನಕ್ಕೆ ತಂದಿದ್ದರು.
ಈ ಬೆಳವಣಿಗೆಯ ನಂತರ ನವೆಂಬರ್ 3 ರಂದು ಅನಿರೀಕ್ಷಿತ ನಡೆಯೆಂಬಂತೆ ಫಾ ಮಹೇಶ್ ಕುಟುಂಬಸ್ಥರು ನೀಡಿದ “ಆತ್ಮಹತ್ಯೆ ಬಗ್ಗೆ ತನಿಖೆ ಬೇಡವೆಂದು ಯಾರಲ್ಲೂ ವಿನಂತಿಸಲಿಲ್ಲ “ ಎಂಬ ಪತ್ರಿಕಾ ಪ್ರಕಟಣೆಯೊಂದು ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಹಾಗೂ ಪೋಲಿಸರನ್ನು ಪೇಚಿಗೆ ಸಿಲುಕಿಸಿತ್ತು. ಆದರೆ ಫಾ.ಮಹೇಶ್ ಕುಟುಂಬಸ್ಥರು ತನಿಖೆ ಬೇಡವೆಂದು ಧರ್ಮಪ್ರಾಂತ್ಯಕ್ಕೆ ಬರೆದು ಕೊಟ್ಟ ಪತ್ರಿಕೆಯ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿಗೆ ಬಲ್ಲ ಮೂಲಗಳಿಂದ ಮಾಹಿತಿ ದೊರಕಿತ್ತು.ಈ ಬಗ್ಗೆ ಪೋಲಿಸ್ ಹಾಗೂ ಧರ್ಮಪ್ರಾಂತ್ಯದ ವತಿಯಿಂದ ಶೀಘ್ರದಲ್ಲೇ ಅಧಿಕೃತ ಹೇಳಿಕೆ ಹೊರಬರಲಿದೆ.
ಇದೇ ಸಂದರ್ಭದಲ್ಲಿ ಘಟನೆಗೆ ಸಂಬಂಧಿಸಿ ಶಿರ್ವ ಧರ್ಮಕೇಂದ್ರ ಒಡೆದ ಮನೆಯಂತಾಗಿದೆ. ಈ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿಯು ಪಾಲನಾ ವ್ಯಾಪ್ತಿಗೆ ಒಳಪಟ್ಟ ಕೆಲ ವ್ಯಕ್ತಿಗಳನ್ನು ಸಂಪರ್ಕಿಸಿದಾಗ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿದ್ದಾರೆ.
“ಶನಿವಾರ ಹಾಗೂ ಭಾನುವಾರ ನಡೆದ ಪ್ರತಿಭಟನೆಯು ಸ್ವಾಗಾತಾರ್ಹ ಆದರೆ ಪ್ರತಿಭಟನೆಗೆ ನೆರೆದ ಹೆಚ್ಚಿನ ಜನರು ಶಿರ್ವ ಇಗರ್ಜಿಯ ವ್ಯಾಪ್ತಿಗೆ ಒಳಪಟ್ಟವರಲ್ಲ. ಇತರ ಇಗರ್ಜಿಗೆ ಒಳಪಟ್ಟ ಸದಸ್ಯರಂತೆ ಶಿರ್ವ ಇಗರ್ಜಿಯ ಜನರು ಶಾಂತಿಪ್ರಿಯರು ಹಾಗೂ ಇಗರ್ಜಿಯ ಹೆಸರಿಗೆ ಕಳಂಕ ತರಲು ಇಚ್ಛಿಸದವರು" ಎಂದು ಸ್ಥಳೀಯ ಸದಸ್ಯರೊಬ್ಬರು ಪ್ರತಿಟನೆಯ ಬಗ್ಗೆ ತಮ್ಮ ಅಭಿಪ್ರಾಯ ದಾಯ್ಜಿವರ್ಲ್ಡ್ ವಾಹಿನಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಫಾ. ಮಹೇಶ್ ಆತ್ಮಹತ್ಯೆ ಹೆಸರಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸ್ಪಷ್ಟ ರಾಜಕೀಯವಿದೆ. ನೆರೆ ಇಗರ್ಜಿಯ ವ್ಯಾಪ್ತಿಗೆ ಬರುವ ರಾಜಕೀಯ ಮುಖಂಡರೊಬ್ಬರು ಶಿರ್ವದಲ್ಲಿರುವ ತನ್ನದೇ ಸಮುದಾಯದ ರಾಜಕೀಯ ಮುಖಂಡರೊಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಕರಣವನ್ನು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ, ಈ ರಾಜಕೀಯ ಮುಖಂಡರ ವೈಷಮ್ಯಕ್ಕೆ ಶಿರ್ವ ಇಗರ್ಜಿಗೊಳಪಟ್ಟ ಸದಸ್ಯರು ಬಲಿಪಶುಗಳಾಗುತ್ತಿದ್ದಾರೆ" ಎಂದು ಇನ್ನೋರ್ವ ಸ್ಥಳೀಯ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಾಯ್ಜಿವರ್ಲ್ಡ್ ವಾಹಿನಿಯೊಂದಿಗೆ ಮಾತನಾಡಿದ ಧರ್ಮಪ್ರಾಂತ್ಯದ ಯುವಸಂಘಟನೆಯ ಸಕ್ರೀಯ ಸದಸ್ಯೆಯೋರ್ವಳು “ಫಾ. ಮಹೇಶ್ ಆತ್ಮಹತ್ಯೆಗೈಯಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತ ಹೇಳುವ ಓರ್ವ ರಾಜಕೀಯ ಮುಖಂಡನೊಬ್ಬ ಜನರನ್ನು ಹಾದಿ ತಪ್ಪಿಸುತ್ತಿದ್ದಾನೆ. ಈ ವ್ಯಕ್ತಿಯು ಇಗರ್ಜಿಯಲ್ಲಿ ಬಿಷಪ್ ಹಾಗೂ ಪೋಲಿಸ್ ಅಧಿಕಾರಿಗಳು ಸಭೆ ನಡೆಸುತ್ತಿದ್ದಾಗ ಪೋಲಿಸ್ ವಲಯವನ್ನು ಭೇದಿಸಿ ವಿನಾ ಕಾರಣ ಸಭೆಯ ಮಧ್ಯಪ್ರವೇಶಿಸಿ ಗಲಾಟೆ ನಡೆಸಿದ್ದರು. ಆದರೆ ಪೋಲಿಸರು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳದೇ ಎಚ್ಚರಿಕೆ ನೀಡದೆ ಬಿಟ್ಟಿದ್ದರು. ನೆಲದ ಕಾನೂನು ಹಾಗೂ ಅಧಿಕಾರಿಗಳಿಗೆ ಗೌರವ ಕೊಡದ ಇಂತಹ ವ್ಯಕ್ತಿಗಳು ಪ್ರತಿಭಟನೆ ಮಾಡಲು ಎಷ್ಟು ಯೋಗ್ಯರು..?” ಎಂದು ಯುವಸಂಘಟನೆಯ ಸಕ್ರೀಯ ಸದಸ್ಯೆ ಪ್ರಶ್ನಿಸಿದ್ದಾರೆ.
“ನಾವು ಶಿರ್ವದ ಜನರು ಶಾಂತಿ ಬಯಸುವವರು. ಪ್ರತಿಭಟನೆಯಂತಹ ಘಟನೆಗಳಿಂದ ಹೆಚ್ಚಿನ ಧರ್ಮಗುರುಗಳು ಇಲ್ಲಿಗೆ ಆಗಮಿಸಲು ಹಿಂಜರಿಯುತ್ತಿದ್ದಾರೆ. ಕೆಲ ವ್ಯಕ್ತಿಗಳ ಸ್ವಾರ್ಥಕ್ಕಾಗಿ ನಮ್ಮ ಧರ್ಮಕೇಂದ್ರದ ಶಾಂತಿ ಕದಡಿದಂತಾಗಿದೆ. ಫಾ. ಮಹೇಶ್ ಆತ್ಮಹತ್ಯೆ ವಿಚಾರದಲ್ಲಿ ನಮಗೆ ನ್ಯಾಯ ಬೇಕಾಗಿದೆ. ಬಿಷಪ್ ಅವರು ಆರಂಭಿಕ ದಿನಗಳಲ್ಲೇ ಈ ಬಗ್ಗೆ ಸಮಜಾಯಿಷಿ ನೀಡುತ್ತಿದ್ದಾರೆ ಈಗಿನ ಪರಿಸ್ಥಿತಿ ಉದ್ಭವಿಸುತ್ತಿರಲ್ಲಿಲ್ಲ. ಆದರೆ ಅವರಿಗೂ ಅವರದ್ದೇ ಆದ ಕಾರಣಗಳಿರಬಹುದು್" ಎಂದು ಪ್ರಕರಣದ ಬಗ್ಗೆ ಇನ್ನಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಘಟನೆಯ ಬಗ್ಗೆ ವಿಚಾರಿಸಿದಾಗ ಭಾವುಕರಾಗಿ ಸ್ಥಳೀಯ ಮಹಿಳೆಯೋರ್ವರು “ಧಾರ್ಮಿಕ ಮುಖಂಡರಾದ ಬಿಷಪ್ ಅವರನ್ನು ಮಕ್ಕಳ ಮುಂದೆ ಹೀಯಾಳಿಸಿ ಅವರಿಗೆ ಕೆಟ್ಟ ಸಂದೇಶವೊಂದನ್ನು ನೀಡಿದ್ದೇವೆ. ಶಾಂತಿಪ್ರಿಯ ಕ್ರೈಸ್ತರಿಗೆ ಇದು ಶೋಭೆ ತರುವಂತದಲ್ಲ. ಬಿಷಪ್ ಅವರ ವಾಹನವನ್ನು ಪುಡಿಗೈದು ಅವರನ್ನು ಹೀಯಾಳಿಸುವ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟದ್ದು ಸಭ್ಯತೆಯನ್ನು ಮೀರಿದಂತಾಗಿದೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅಂದಾಜು 500 ಜನರು ಪಾಲ್ಗೊಂಡಿದ್ದರು. ಇವರಲ್ಲಿ ಬೆರಳೆಣಿಕೆಯಷ್ಟೇ ಶಿರ್ವ ಇಗರ್ಜಿಗೆ ಒಳಪಡುವ ಸದಸ್ಯರಿದ್ದರು. ಉಳಿದವರೆಲ್ಲರೂ ಹೊರಗಿನಿಂದ ಬಂದವರು. ಶಿರ್ವ ಇಗರ್ಜಿ ವಿಚಾರಕ್ಕೆ ಸಂಬಂಧಪಟ್ಟ ಪ್ರತಿಭಟನೆ ನಡೆಯುತ್ತಿರಬೇಕಾದರೆ ಯಾಕಾಗಿ ಇಲ್ಲಿನ ಸದಸ್ಯರು ಹಾಗೂ ಸ್ಥಳೀಯರು ಇದರಲ್ಲಿ ಭಾಗವಹಿಸಲಿಲ್ಲ ? ಶಿರ್ವ ಧರ್ಮಕೇಂದ್ರವು ಒಡೆದ ಮನೆಯಾಗಿದೆಯೇ ? ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಶಿರ್ವದ ಜನರನ್ನು ಎರಡು ಪಂಗಡಗಳನ್ನಾಗಿ ಮಾಡಿದ್ದಾರೆಯೇ? ವಿಶೇಷ ಮುತುವರ್ಜಿ ಇರಿಸಿಕೊಂಡು ತನಿಖೆ ನಡೆಸುತ್ತಿರುವ ಪೋಲಿಸ್ ಇಲಾಖೆಯಲ್ಲಿ ನಂಬಿಕೆಯಿಲ್ಲವೇ? ಫಾ. ಮಹೇಶ್ ಅವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿದ್ದ ಚಿತ್ರಗಳು ವ್ಯಾಪಕವಾಗಿ ಹರಿಯಬಿಟ್ಟು ಯಾಕೆ ಅವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ ಹಾಗೂ ಹೀಗೆ ಜನರನ್ನು ಹಾದಿತಪ್ಪಿಸುವ ಹಿಂದಿನ ಉದ್ದೇಶವಾದರೂ ಏನು.? ಸಂಸ್ಕೃತಿ ಹಾಗೂ ಸಾಮಾನ್ಯ ಮರ್ಯಾದೆಯನ್ನು ಬಿಟ್ಟು ನಾವು ಎತ್ತ ಸಾಗುತ್ತಿದ್ದೇವೆ? ಈ ದೇಶದ ಪೋಲಿಸ್ , ಕಾನೂನು ಹಾಗೂ ನ್ಯಾಯಾಲಯಗಳ ಮೇಲೆ ನಮಗೆ ನಂಬಿಕೆಯಿಲ್ಲವೇ ?” ಎಂದು ಪ್ರತಿಭಟನೆಯನ್ನು ನೋಡಿ ಇಗರ್ಜಿ ಆವರಣದೊಳಗಿದ್ದ ವ್ಯಕ್ತಿಯೊಬ್ಬರು ಉಚ್ಚ ಸ್ವರದಲ್ಲಿ ಹೀಗೆ ಗುಡುಗಿದ್ದರು.
ದಾಯ್ಜಿವರ್ಲ್ಡ್ ವಾಹಿನಿಗೆ ದೊರಕಿದ ಮಾಹಿತಿ ಪ್ರಕಾರ ಸರ್ಕಲ್ ಇನ್ಸ್ಫೆಕ್ಟರ್ ಮಹೇಶ್ ಪ್ರಸಾದ್, ಸಬ್ ಇನ್ಸ್ಪೆಕ್ಟರ್ ಖಾದರ್ , ಎಸಿಪಿ ಹಾಗೂ ಎಸ್ಪಿಯವರನ್ನು ಒಳಗೊಂಡ ಪೋಲಿಸ್ ತಂಡ , ಪ್ರತಿಭಟನೆಯ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಶೇಷ ಯಶಸ್ವಿಯನ್ನು ಕಂಡಿದೆ. ಹಾಗೆಯೇ ಶಿರ್ವ ಇಗರ್ಜಿಯ ಕ್ರೈಸ್ತ ಸಮುದಾಯವು ಫಾ. ಮಹೇಶ್ ಆತ್ನಹತ್ಯೆ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನು ಪ್ರಕಾರ ಶಿಕ್ಷಿಸಿಬೇಕೆಂದು ಆಶಿಸುತ್ತಿದೆಯೆಂದು ನಮ್ಮ ವಾಹಿನಿಗೆ ತಿಳಿದುಬಂದಿದೆ.
ಇಗರ್ಜಿಯ ಆಸ್ತಿ ,ಕಟ್ಟಡ ನಿರ್ಮಾಣ ಹಾಗೂ ಬಾಡಿಗೆದಾರರ ವಿಚಾರಗಳಲ್ಲಿ ಪ್ರಧಾನ ಧರ್ಮಗುರುಳನ್ನು ಗುರಿಯಾಗಿರಿಸಿಕೊಂಡು ಸ್ಥಳೀಯ ಕಾಂಟ್ರೆಕ್ಟ್ ಲಾಭಿಯೊಂದು ನಡೆಸುತ್ತಿರುವ ಷಡ್ಯಂತ್ರವೂ, ಫಾ.ಮಹೇಶ್ ಅವರ ಹೆಸರಲ್ಲಿ ನಡೆಯುವ ಪ್ರತಿಭಟನೆಯ ಹಿಂದಿದೆ ಎಂಬ ಅರೋಪ ಬಲವಾಗಿ ಕೇಳಿಬರುತ್ತಿದೆ. ಪ್ರತಿಭಟನೆಯಂತಹ ಘಟನೆಗಳಲ್ಲಿ ಮೂಡುಬೆಳ್ಳೆಯ ರಾಜಕೀಯ ಫುಡಾರಿಯೊಬ್ಬರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆಂಬ ವದಂತಿಯೂ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಅಧಿಕೃತರು ಸಾಕ್ಷಿ ಸಮೇತ ಈ ಬಗ್ಗೆ ಜನರಿಗೆ ಸ್ಪಷ್ಟಣೆ ನೀಡಲಿದ್ದಾರೆ ಎಂದು ದಾಯ್ಜಿವರ್ಲ್ಡ್ ವಾಹಿನಿಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಧರ್ಮಪ್ರಾಂತ್ಯದ ಅಧಿಕೃತರು ಶೀಘ್ರದಲ್ಲೇ ಧರ್ಮಗುರುಗಳ ಹಾಗೂ ಬಿಷಪ್ ಅವರ ವಿರುದ್ಧ ಪತ್ರಿಕಾಗೋಷ್ಟಿ ಹಾಗೂ ಪ್ರತಿಭಟನೆಯ ವೇಳೆಯಲ್ಲಿ ಸುಳ್ಳು ಅರೋಪಗಳನ್ನು ಹೊರಿಸಿ ಮಾನಹಾನಿಕರ ವದಂತಿ ಹರಡಿಸಿದವರ ಬಗ್ಗೆ ಕಾನೂನಿನ ಮೊರೆಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಧರ್ಮಗುರುಗಳ, ಬಿಷಪ್ ಅವರ ಅನಧಿಕೃತ ವೀಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟವರ ವಿರುದ್ಧವೂ ಧರ್ಮಪ್ರಾಂತ್ಯದ ಆಡಳಿತ ಮಂಡಳಿ ಕಾನೂನಿನ ಮೊರೆಹೋಗಲಿದೆ.