ಮಂಗಳೂರು, ನ 7 (Daijiworld news/MB): ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಭರದಲ್ಲಿ ತಯಾರಿ ನಡೆಯುತ್ತಿದೆ. ಶಾಂತಿಯುತ ಮತದಾನ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪೂರ್ವತಯಾರಿ ಮಾಡಿದೆ. ಈ ನಡುವೆ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ನಡೆಯುವ ನ.12ರಂದು ಪಾಲಿಕೆ ವ್ಯಾಪ್ತಿ ಹಾಗೂ ಉಪಚುನಾವಣೆ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರಿ ಕಚೇರಿಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಎಲ್ಲಾ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೆಯೇ ಎಲ್ಲಾ ಸಾರ್ವಜನಿಕ ಉದ್ದಿಮೆಗಳು, ವ್ಯವಹಾರಿಕ ಸಂಸ್ಥೆಗಳು, ಖಾಸಗಿ ಕಂಪೆನಿಗಳು, ಇನ್ನಿತರೆ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ. ಆದರೆ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ರಜೆ ಇರುವುದಿಲ್ಲ. ಅವರಿಗೆ ಮತ ಚಲಾಯಿಸಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
ಇದಲ್ಲದೆ ನ.12ರಂದು ಬಂಟ್ವಾಳ ತಾಲೂಕಿನ ಪಂಜಿಕಲ್ಲು, ಪುತ್ತೂರಿನ ಬಜತ್ತೂರು ಮತ್ತು ಮರ್ದಾಲ , ಸುಳ್ಯದ ಕಲ್ಮಡ್ಕ ಮತ್ತು ಬಲ್ಪ, ಬೆಳ್ತಂಗಡಿಯ ಅರಸಿನಕ್ಕಿ ಮತ್ತು ದರೆಗುಡ್ಡೆಯ ಒಟ್ಟು ಏಳು ಕ್ಷೇತ್ರದ ಗ್ರಾಮಪಂಚಾಯತ್ ನಲ್ಲಿ ಉಪ ಚುನಾವಾಣೆ ನಡೆಯಲಿದೆ.