ಉಡುಪಿ, ನ 7 (Daijiworld News/MSP): ರಾಮ ಮಂದಿರ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಯಾರ ಪರ ತೀರ್ಪು ನೀಡಿದರೂ, ಯಾವುದೇ ಸಂಘಟನೆ , ಸಮುದಾಯ ಬಹಿರಂಗವಾಗಿ ವಿಜಯೋತ್ಸವವನ್ನು ಆಚರಿಸಬಾರದು, ಮೆರವಣಿಗೆ ಮಾಡಬಾರದು. ಘೋಷಣೆ ಹಾಕಬಾರದು, ಯಾರ ಮನಸ್ಸಿಗೂ ನೋವಾಗುವಂತೆ ನಡೆದುಕೊಳ್ಳಬಾರದು, ಅಹಿತಕರ ಘಟನೆಗಳು, ಸಂಘರ್ಷಗಳು ನಡೆಯಬಾರದು, ಇದಕ್ಕೆಲ್ಲಾ ಯಾರು ಎಡೆ ಮಾಡಿಕೊಡಬಾರದು ಒಂದು ವೇಳೆ ಸಂಘರ್ಷ ಉಂಟಾದರೆ ನಾನು ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಪೇಜಾವರ ಮಠದ ಸ್ವಾಮೀಜಿಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅವರು ರಾಮ ಮಂದಿರ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಶೀಘ್ರದಲ್ಲೇ ಹೊರಬೀಳುವ ದೃಷ್ಟಿಯಿಂದ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾನ್ಯ ನ್ಯಾಯಾಲಯ ನೀಡಿದ ತೀರ್ಪು ಯಾರ ಪರವಾಗಿಯೇ ಬರಲಿ, ಅದನ್ನು ನಾಡಿನ ಜನತೆ ಶಾಂತವಾಗಿ ಸ್ವೀಕರಿಸಬೇಕು. ಒಂದು ವೇಳೆ ಶಾಂತಿ ಭಂಗವಾದರೆ ನಾನು ಉಪವಾಸ ಸತ್ಯಾಗ್ರಹ ಕೂರುತ್ತೇನೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ.
ನವೆಂಬರ್ 15ರೊಳಗೆ ತೀರ್ಪು ನೀಡುವ ಸಾಧ್ಯತೆ ಇದ್ದು ರಾಮಮಂದಿರದ ಕಡೆಗೆ ತೀರ್ಪು ಬರುತ್ತದೆ ಎಂಬ ಭಾವನೆಯಿದೆ. ಯಾಕೆಂದರೆ ಕೋರ್ಟ್ನ ತೀರ್ಪು ಸಂವಿಧಾನ ಬದ್ದವಾಗಿರುತ್ತದೆ. ಹೀಗಾಗಿ ಸಾರ್ವಜನಿಕರಲ್ಲಿ ನನ್ನ ಮನವಿ. ವಿಜಯೋತ್ಸವವನ್ನು ಬೇಕಾದರೆ ಭಕ್ತರು ತಮ್ಮ ಮನೆಗಳಲ್ಲಿ ಪೂಜೆ, ಭಜನೆ ಮಾಡುವ ಮೂಲಕ ಆಚರಿಸಲಿ. ಈ ಮನವಿ ಎಲ್ಲಾ ಹಿಂದು ಪರ ಸಂಘಟನೆಗಳಿಗೂ ಅನ್ವಯಿಸುತ್ತದೆ ಎಂದು ಎಚ್ಚರಿಸಿದ್ದಾರೆ
ರಾಮಮಂದಿರ ನಿರ್ಮಾಣ ಮಾಡುವ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ತೀರ್ಪು ಬರಲಿ ಆಮೇಲೆ ರಾಮಮಂದಿರ ನಿರ್ಮಾಣ ಮಾಡುವ ವಿಚಾರವಾಗಿ ಯೋಚಿಸುತ್ತೇವೆ, ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಈಗಾಗಲೇ ಗುಪ್ತ ಸಂಧಾನದ ಮಾತುಕತೆ ನಡೆದಿತ್ತು. ಇದಕ್ಕೆ ಎಲ್ಲರೂ ಒಪ್ಪಿದ್ದರು. ಅಯೋಧ್ಯೆಯನ್ನು ಹಿಂದುಗಳಿಗೆ ಮುಸ್ಲಿಮರು ಬಿಟ್ಟು ಕೊಡುವ ವಿಚಾರದವರೆಗೆ ಬಂದಿತ್ತು. ಆದರೆ ನಂತರದ ರಾಜಕೀಯ ಬೆಳವಣಿಗೆಯಿಂದಾಗಿ ಅದು ನಿಂತಿತು. ಈಗ ತೀರ್ಪು ನಮ್ಮದೇ ಪರವಾಗಿ ಬರುವ ಭರವಸೆ ಇದೆ, ಎಂದು ಅವರು ಹೇಳಿದರು.