ಉಳ್ಳಾಲ, ನ 7(Daijiworld News/MSP): ಝೊಮಾಟೋ ಕಂಪೆನಿ ವಿರುದ್ಧ ದೇರಳಕಟ್ಟೆ ತೊಕ್ಕೊಟ್ಟು ಭಾಗದ ಸುಮಾರು 100 ರಷ್ಟು ಡೆಲಿವರಿ ಹುಡುಗರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು.
ಸಾಂದರ್ಭಿಕ ಚಿತ್ರ
ಸರಿಯಾಗಿ ವೇತನ ನೀಡದೆ ಕಂಪೆನಿ ದಬ್ಬಾಳಿಕೆ ನಡೆಸುತ್ತಿದೆ. ವೇತನ ಪ್ರಶ್ನಿಸಿದಾಗ ಕೆಲಸದಿಂದಲೇ ತೆಗೆಯುತ್ತಿದ್ದಾರೆ. 5 ತಿಂಗಳ ಹಿಂದೆ ಇದ್ದ ವೇತನವನ್ನು ಕಂಪೆನಿ ಬಹಳ ಕಡಿಮೆಗೊಳಿಸಿದೆ. ಬೈಕ್ ಐ.ಟಿ ಮತ್ತು ಸೈಕಲ್ ಐ.ಡಿ ಗೆ ಸಿಗುವ ವೇತನವೇ ಬಹಳಷ್ಟು ಕಡಿಮೆಯಾಗಿದೆ. ಪ್ರಬಂಧಕರಲ್ಲಿ ಮಾತನಾಡಲು ದೂರದ 20 ಕಿ.ಮೀ ತೆರಳಬೇಕಿದೆ. ಸ್ಥಳೀಯವಾಗಿ ಡೆಲಿವರಿ ನಡೆಸುವ ಹುಡುಗರಿಗೆ ಅನ್ಯಾಯವಾಗುತ್ತಿದೆ. ಹಲವು ಭಾರಿ ಸಮಸ್ಯೆಗಳನ್ನು ತೋಡಿಕೊಂಡರೂ ಸರಿಯಾದ ಸ್ಪಂಧನೆ ಸಿಕ್ಕಿಲ್ಲ. ಅದಕ್ಕಾಗಿ ಇಂದು ಎಲ್ಲರೂ ಡೆಲಿವರಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದೇವೆ. ಕೂಡಲೇ ಕಂಪೆನಿ ಹಿಂದೆ ಇದ್ದಂತೆಯೇ ವೇತನ ನೀಡಿದಲ್ಲಿ ಕಾರ್ಯ ನಿರ್ವಹಿಸುತ್ತೇವೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಝೊಮಾಟೋ ಮಂಗಳೂರು ವಿಭಾಗದ ಪ್ರಬಂಧಕ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಹಿಡಿದ ಪ್ರತಿಭಟನಾಕಾರರು ವೇತನ ಪರಿಷ್ಕರಿಸದೇ ಇದ್ದಲ್ಲಿ ಪ್ರತಿಭಟನೆ ಹಿಂತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.