ಉಡುಪಿ, ನ 07 (DaijiworldNews/SM): ಮಹಾತ್ಮ ಗಾಂಧೀಜಿಯವರ, ನನ್ನ ಜೀವನವೇ ಒಂದು ಸಂದೇಶ ಎನ್ನುವ ಮಾತುಗಳು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕು. ಗಾಂಧೀಜಿಯವರು ಈ ಕಾಲದಲ್ಲೂ ಪ್ರಸ್ತುತ. ಏಕೆಂದರೆ ಗ್ರಾಮ ಸ್ವರಾಜ್ಯ, ಸ್ವಚ್ಛ ಭಾರತದಂತಹ ಅವರ ಚಿಂತನೆಗಳನ್ನು ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಅವರು ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಆಯೋಜಿಸಲಾದ ಗಾಂಧೀಜಿಯವರ ಅಪೂರ್ವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರ ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸರಳವಾಗಿ ಜೀವಿಸುವುದನ್ನು, ಯಾವ ರೀತಿ ಹೋರಾಟ ಮಾಡಬೇಕೆನ್ನುವುದನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ. ಮಾತು ಕಡಿಮೆ, ಹೆಚ್ಚು ದುಡಿಮೆ ಮಾಡುವ ಮೂಲಕ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಕೆಲಸ ಕೀಳಲ್ಲ ಎಂದು ಹೇಳುತ್ತಿದ್ದ ಗಾಂಧೀಜಿ ತಾವೇ ಸ್ವತಃ ಶೌಚಾಲಯವನ್ನು ತೊಳೆಯುತ್ತಿದ್ದರು. ನಾವೆಲ್ಲರೂ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಧ್ಯವಾದಷ್ಟು ನಡೆಯುವ ಪ್ರಯತ್ನ ನಡೆಸಬೇಕೆಂದು ಹೇಳಿದರು. ಗಾಂಧೀಜಿಯವರ ಜೀವನ ಚರಿತ್ರೆಯನ್ನು ಫೋಟೋಗ್ರಫಿ ಮತ್ತು ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೋರಿಸುವಂತೆ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.