ಮಂಗಳೂರು, ಸೆ15 : ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಮಂಗಳೂರು ಜೈಲಿನಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರನ್ನು ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಸೆ.11ರಂದು ಮಂಗಳೂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ಮೇಲೆ ಇನ್ನೊಂದು ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು. ಬಳಿಕ ಗಾಯಾಳುಗಳಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಪಿಗಳು ಹಫ್ತಾ ನೀಡುವಂತೆ ಬೆದರಿಕೆಯೊಡ್ಡಿ ಇವರ ಮೇಲೆ ಹಲ್ಲೆ ನಡೆಸಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ನವನೀತ್ ಶೆಟ್ಟಿ, ನಿರಂಜನ್ ಭಟ್ ಮತ್ತು ರಾಜೇಶ್ವರಿ ಶೆಟ್ಟಿಯನ್ನು ಮಂಗಳೂರು ಜೈಲಿನಿಂದ ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಆದರೆ ಹಲ್ಲೆ ಮಾಡಿದ ಆರೋಪಿಗಳನ್ನು ಮಾತ್ರ ಇದೇ ಜೈಲಿನಲ್ಲಿ ಇರಿಸಲಾಗಿದೆ. ನಿರಂಜನ್ ಮತ್ತು ನವನೀತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿನ ಪ್ರಮುಖ ಆರೋಪಿ ಧನರಾಜ್, ಲಾಯ್ವೇಗಾಸ್ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳ ವಿರುದ್ಧ ಬರ್ಕೆ ಪೊಲೀಸರು ಅಂದು ಪ್ರಕರಣ ದಾಖಲಿಸಿದ್ದರು.