ಮಂಗಳೂರು, ನ.08(Daijiworld News/SS): ಮನಪಾ ಚುನಾವಣೆ ಮತದಾನಕ್ಕೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿ ಉಳಿದಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಈಗ ಸ್ಪರ್ಧಾ ಕಣದಲ್ಲಿದ್ದಾರೆ. ಈ ವರ್ಷ ಮಂಗಳೂರು ಮಹಾ ನಗರ ಪಾಲಿಕೆ (ಎಂಸಿಸಿ) ಚುನಾವಣೆ ನವೆಂಬರ್ 12 ರಂದು ನಡೆಯಲಿದ್ದು, ಹೊಸ ಹೊಸ ಮುಖಗಳು ಕಣಕ್ಕಿಳಿದಿದ್ದಾರೆ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸಿದ್ಧಪಡಿಸಿದ 180 ಅಭ್ಯರ್ಥಿಗಳ ಪೈಕಿ 88 ಮಹಿಳಾ ಅಭ್ಯರ್ಥಿಗಳು ಈ ಬಾರೀ ಕಣಕ್ಕಿಳಿಯಲಿದ್ದಾರೆ. ನಗರ ಸ್ಥಳೀಯ ಸಂಸ್ಥೆ (ಯುಎಲ್ಬಿ) ಚುನಾವಣೆಯಲ್ಲಿ ಮಹಿಳೆಯರಿಗೆ 50% ವಾರ್ಡ್ ಸೀಟುಗಳನ್ನು ನಿಗದಿಪಡಿಸಿ ಕರ್ನಾಟಕ ಸರ್ಕಾರ 2018ರ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿದ ನಂತರ ಇದು ಜಾರಿಗೆ ಬಂದಿದೆ. 18 ವಾರ್ಡ್ಗಳನ್ನು ಸಾಮಾನ್ಯ ವರ್ಗಕ್ಕೆ (ಮಹಿಳೆಯರಿಗೆ) ಮೀಸಲಿಡಲಾಗಿದ್ದು, ಎಂಟು ಮಂದಿ ಹಿಂದುಳಿದ ವರ್ಗ ಎ (ಮಹಿಳೆಯರಿಗೆ), ಎರಡು ಹಿಂದುಳಿದ ವರ್ಗ ಬಿ (ಮಹಿಳೆಯರಿಗೆ) ಮತ್ತು ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಗಳಿಗೆ ಮೀಸಲಿಡಲಾಗಿದೆ.
ಮಂಗಳೂರು ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ 50% ರಷ್ಟು ಮಹಿಳೆಯರಿದ್ದಾರೆ. 88 ಮಹಿಳಾ ಅಭ್ಯರ್ಥಿಗಳಲ್ಲಿ 31 ಮಂದಿ (ಒಂದು ಪರಿಶಿಷ್ಟ ಜಾತಿ ಮೀಸಲಾತಿ ವಾರ್ಡ್ ಸೇರಿದಂತೆ) ಬಿಜೆಪಿ ಟಿಕೆಟ್ಗಳಲ್ಲಿ ಸ್ಪರ್ಧಿಸಲಿದ್ದು, 30 ಮಂದಿ ಕಾಂಗ್ರೆಸ್ ಪರ ಸ್ಪರ್ಧಿಸಲಿದ್ದಾರೆ. ಜನತಾದಳ (ಜಾತ್ಯತೀತ) ಮೂವರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೂವರು ಮಹಿಳೆಯರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿನಿಧಿಸಲಿದ್ದರೆ, ಒಬ್ಬರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಅಭ್ಯರ್ಥಿಯಾಗಲಿದ್ದಾರೆ. ಸುಮಾರು 18 ಮಹಿಳಾ ಅಭ್ಯರ್ಥಿಗಳು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿ ಕ್ಯಾಥೊಲಿಕ್ ಪ್ರಾಬಲ್ಯದ ಬೆಂದೂರ್ (ಜನರಲ್ ವಾರ್ಡ್ ಸಂಖ್ಯೆ 38) ನಲ್ಲಿ ಕಣಕ್ಕಿಳಿದಿರುವ ಯುವ ರಾಜಕೀಯ ಅನಾನುಭವಿ 26 ವರ್ಷದ ಜೆಸ್ಸೆಲ್ ಡಿಸೋಜಾ, ಬಿಜೆಪಿ ಅಭ್ಯರ್ಥಿಯಾಗಿರಲು ನಾನು ಉತ್ಸುಕರಾಗಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಜೆಸ್ಸೆಲ್, ನಾನು ಯಾವುದೇ ಅಭ್ಯರ್ಥಿಯ ವಿರುದ್ಧ ಹೋರಾಡುತ್ತಿಲ್ಲ. ನನಗೂ ನನ್ನ ಪಕ್ಷಕ್ಕೂ ಗೆಲುವಿನ ಭರವಸೆ ಇದೆ. ವಾರ್ಡ್ ಸದಸ್ಯರಿಗೆ ಉತ್ತಮ ಜೀವನ ಮಟ್ಟವನ್ನು ಒದಗಿಸಲು ನಾನು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.
ಮತ್ತೊಂದೆಡೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಮೇಘನಾ ದಾಸ್ ಕಣಕ್ಕಿಳಿದಿದ್ದಾರೆ. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿಕೆಟ್ನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೇಘನಾ ಬಿಜೆಪಿ ಅಭ್ಯರ್ಥಿ ಸಂಧ್ಯಾ ಮೋಹನ್ ಆಚಾರ್ಯ ವಿರುದ್ಧ ಮನ್ನಗುದ್ದೆಯಲ್ಲಿ (ಜನರಲ್ ವುಮನ್ ವಾರ್ಡ್-28) ಸ್ಪರ್ಧಿಸಲಿದ್ದಾರೆ.
ಈ ಬಾರಿ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಆಶಾ ಡಿ’ಸಿಲ್ವಾ ಪಳ್ನೀರ್ ವಾರ್ಡ್ನಿಂದ ಬಿಜೆಪಿ ಪರವಾಗಿ ಸ್ಪರ್ಧಿಸಲಿದ್ದಾರೆ. "ನನ್ನ ಹಿಂದಿನ ಅಧಿಕಾರದ ಅವಧಿಯಲ್ಲಿ ನಾನು ಜನರಿಗೆ ನನ್ನ ಕೊಡುಗೆ ನೀಡಿದ್ದೇನೆ. ಆದರೆ ಕಾಂಗ್ರೆಸ್ ನನಗೆ ಅವಕಾಶವನ್ನು ನೀಡಲಿಲ್ಲ. ಅದೇನೇ ಇದ್ದರೂ, ಜನರು ಅರ್ಹತೆಯನ್ನು ನೋಡಿದ್ದಾರೆ ಮತ್ತು ನನ್ನನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇತ್ತ ಮಾವಿಸ್ ರೊಡ್ರಿಗಸ್ ಎಂಬುವವರು ವಾರ್ಡ್ 33 (ಕದ್ರಿ) ಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.
2013ರ ನಾಗರಿಕ ಸಂಸ್ಥೆಯ ಚುನಾವಣೆಯಲ್ಲಿ 243 ಅಭ್ಯರ್ಥಿಗಳು ಮಹಿಳೆಯರು ಕಣಕ್ಕಿಳಿದಿದ್ದರು. ಯುಎಲ್ಬಿ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 35 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ ಕೇವಲ 19 ಸ್ಥಾನಗಳೊಂದಿಗೆ ಸೋಲು ಕಂಡಿತ್ತು. ಜೆಡಿಎಸ್ ಎರಡು ಸ್ಥಾನಗಳನ್ನು ಗೆದ್ದಿತ್ತು. ಉಳಿದಂತೆ ತಲಾ ಒಂದು ಸ್ಥಾನವನ್ನು ಸಿಪಿಐ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದರು.
ಒಟ್ಟಾರೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರೆ, ಜಿಲ್ಲಾಡಳಿತ ಆಡಳಿತಾತ್ಮಕವಾಗಿ ಚುನಾವಣೆ ನಡೆಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಮಾತ್ರವಲ್ಲ, ಈ ಬಾರಿಯ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬಾರೀ ಕುತೂಹಲವನ್ನು ಮೂಡಿಸಿದೆ.