ಮಂಗಳೂರು, ನ 8 (Daijiworld News/MB): ಜೆ. ಆರ್. ಲೋಬೊರವರು ಜನರಿಗೆ ಮೋಸ ಮಾಡಿದ್ದಾರೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ನ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ವೇದವ್ಯಾಸ್ ಕಾಮತ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು, ವೇದವ್ಯಾಸ್ ರವರು ಬರೀ ಪೋಸ್ಟರ್ ಗಳು ಮತ್ತು ನಾನು ಕಾರ್ಯರೂಪಕ್ಕೆ ತಂದ ಯೋಜನೆಯನ್ನು ಉದ್ಘಾಟನೆ ಮಾಡುವುದರಲ್ಲೇ ಪ್ರಚಾರ ಪಡೆಯುತ್ತಿದ್ದಾರೆ. ಕಳೆದ ಎರಡು ವರ್ಷದ ಅವರ ಆಡಳಿತಾವಧಿಯಲ್ಲಿ ಯಾವ ಹೊಸ ಯೋಜನೆ ರೂಪಿಸಿದ್ದಾರೆ ತೋರಿಸಲಿ. ಅವರು ಯಾವ ಯೋಜನೆಗಳನ್ನು ರೂಪಿಸಿಲ್ಲ. ಅವರು ರಾಜೀನಾಮೆ ನೀಡಲಿ . ನನಗೆ ಅವಕಾಶ ಸಿಕ್ಕರೆ ನಾನು ಆಡಳಿತ ನಡೆಸಿ ತೋರಿಸುತ್ತೇನೆ' ಎಂದು ಹೇಳಿದರು.
'ವೇದವ್ಯಾಸ್ ಕಾಮತ್ ಅವರು ಜಿ ಪ್ಲಸ್ ಥ್ರೀ ವಸತಿ ಸಮುಚ್ಚಯ ಯೋಜನೆಯ ವಿಚಾರದಲ್ಲಿ ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಶಾಸಕರು ನಾನು ಜನರಿಗೆ ಮೋಸ ಮಾಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಸಾಧ್ಯವಾದರೆ ಅದನ್ನು ಸಾಬೀತು ಮಾಡಲಿ. ಈ ಯೋಜನೆ ನನ್ನ ಆಡಳಿತಾವಧಿಯಲ್ಲಿ ಅನುಮೋದನೆಯಾಗಿದ್ದು, ಶಕ್ತಿನಗರದಲ್ಲಿ ಸ್ಥಳ ನಿಗದಿಯಾಗಿತ್ತು. ಕೆಲವು ರಾಷ್ಟ್ರೀಯ ಬ್ಯಾಂಕುಗಳು ಈ ಯೋಜನೆಯಲ್ಲಿ ಕೈಜೋಡಿಸಲು ಮುಂದಾಗಿತ್ತು. ಆದರೆ ಕಾನೂನಿನ ಪ್ರಕಾರ 10 ಎಕ್ರೆಗಿಂತ ಅಧಿಕ ಅರಣ್ಯ ಪ್ರದೇಶವನ್ನು ನಾವು ನಿರ್ಮಾಣ ಪ್ರಕ್ರಿಯೆಗೆ ಬಳಸುವಂತಿಲ್ಲ. ಹಾಗಾಗಿ ಬೇರೆ ಭೂಮಿಯನ್ನು ನಿಗದಿಪಡಿಸಲು ಕಂದಾಯ ಇಲಾಖೆ ಮುಂದಾಗಿತ್ತು. ಈ ನಡುವೆ ಚುನಾವಣೆ ಘೋಚಣೆಯಾಗಿ ಯೋಜನೆಯ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು. ಚುನಾವಣೆಯಲ್ಲಿ ಗೆದ್ದ ವೇದವ್ಯಾಸ್ ಈ ಯೋಜನೆ ಮುಂದುವರಿಸುವಲ್ಲಿ ಯಾವುದೇ ಆಸಕ್ತಿ ತೋರಲಿಲ್ಲ. ಅವರಿಗೆ ಈ ಯೋಜನೆಯ ಮೂಲ ಮಾಹಿತಿಯೇ ಇಲ್ಲ' ಎಂದು ಜಿ ಪ್ಲಸ್ ಥ್ರೀ ವಸತಿ ಸಮುಚ್ಚಯ ಯೋಜನೆಯ ಕುರಿತು ಸ್ಪಷ್ಟಪಡಿಸಿದರು.
'ಸ್ಮಾರ್ಟ್ ಸಿಟಿ ಯೋಜನೆಯ ಪ್ರಸಕ್ತ ಪರಿಸ್ಥಿತಿ ಏನು?, ನಿಮ್ಮ ಆಡಳಿತಾವಧಿಯಲ್ಲಿ ಯಾವ ಹೊಸ ಯೋಜನೆ ಕೈಗೆತ್ತಿಕೊಳ್ಳಲಾಗಿದೆ? ಎಂದು ವೇದವ್ಯಾಸ್ ಕಾಮತ್ ರನ್ನು ಪ್ರಶ್ನಿಸಿದ ಅವರು, ಹತ್ತು ವರ್ಷ ಕಳೆದರೂ ಪಂಪ್ವೆಲ್ ಸರ್ಕಲ್ ಪೂರ್ಣಗೊಂಡಿಲ್ಲ. ನಂತೂರು ಸಂಚಾರದಟ್ಟನೆಗೆ ಪರಿಹಾರ ಕಂಡು ಹುಡುಕಲು ಇವರಿಂದ ಸಾಧ್ಯವಾಗಿಲ್ಲ. ಕನಿಷ್ಟ ಪಕ್ಷ ಕದ್ರಿ ಪಾರ್ಕ್ ನಡೆಸಲೂ ಅವರಿಂದ ಸಾಧ್ಯವಾಗುತ್ತಿಲ್ಲ. ನನ್ನ ಆಡಳಿತಾವಧಿ ಕೊನೆಗೊಂಡ ನಂತರ ಎಲ್ಲ ಯೋಜನೆಗಳು ಸ್ಥಗಿತಗೊಂಡಿದೆ' ಎಂದು ಹೇಳಿದರು.
ಇದಕ್ಕೂ ಮುಂಚೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ ಮಾತಾನಾಡಿ, 'ಬಿಜೆಪಿ ಅಧಿಕಾರವದಿಯಲ್ಲಾದ ಜಿ.ಎಸ್.ಟಿ., ನೋಟ್ ಬ್ಯಾನ್ ನಿಂದಾಗಿ ದೇಶದಲ್ಲಿ ಆರ್ಥಿಕ ದುಸ್ಥಿತಿ ಉಂಟಾಗಿದೆ. ಇದನ್ನು ಮರೆಮಾಚಲು ಜನರನ್ನು ಭಾವನಾತ್ಮಕವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರ ಅಧಿಕಾರದಿಯಲ್ಲಿ ನಡೆದ ಬಹುತೇಕ ಅತ್ಯಾಚಾರ ಪ್ರಕರಣದಲ್ಲಿ ಅವರೇ ಆರೋಪಿಗಳಾಗಿದ್ದಾರೆ. ಜನರು ವಾಸ್ತವಾಂಶವನ್ನು ಮನಗಾಣಬೇಕು' ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮತ್ತು ಇತರ ನಾಯಕರು ಉಪಸ್ಥಿತರಿದ್ದರು.