ಉಡುಪಿ, ನ 8 (Daijiworld News/MSP): ಅಕಾಲಿಕವಾಗಿ ಸಾವಿಗೆ ಶರಣಾದ ಶಿರ್ವ ಡಾನ್ ಬೊಸ್ಕೊ ಅವರ ಸಾವಿನ ನೈಜ ಕಾರಣಗಳನ್ನು ಕಂಡು ಹಿಡಿದು ಭಕ್ತರಲ್ಲಿ ಇರುವ ಗೊಂದಲಗಳಿಗೆ ಶೀಘ್ರ ತೆರೆ ಎಳೆಯುವಂತೆ ಪೊಲೀಸ್ ಇಲಾಖೆಯನ್ನು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಆಗ್ರಹಿಸಿದೆ.
ಶಿರ್ವ ಇಗರ್ಜಿಯ ಸಹಾಯಕ ಧರ್ಮಗುರು ಹಾಗೂ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಅವರ ಸಾವಿನ ತನಿಖೆ ಪ್ರಗತಿಯಲ್ಲಿರುವಾಗ ಅವರ ಸಾವಿನ ಹಿಂದಿನ ನೈಜ ಕಾರಣಗಳನ್ನು ಕಂಡು ಹಿಡಿಯಲು ಎಲ್ಲಾ ಕಾನೂನಾತ್ಮಕ ಕ್ರಮಗಳಿಗೆ ಕೆಥೊಲಿಕ್ ಸಭಾ ಸಹಕಾರ ಹಾಗೂ ಬೆಂಬಲವಿದ್ದು ಪೊಲೀಸ್ ಇಲಾಖೆ ಭಕ್ತರಲ್ಲಿ ಇರುವ ಗೊಂದಲಿಗಳಿಗೆ ಶೀಘ್ರ ತೆರೆ ಎಳೆಯಬೇಕು.
ಇದೇ ವೇಳೆ ಆಧಾರರಹಿತ ವರದಿಗಳನ್ನು ತಿದ್ದಲಾದ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಗೊಂದಲವನ್ನು ಸೃಷ್ಟಿಸುವವರ ವಿರುದ್ದ ಕಾನೂನಾತ್ಮಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸ್ ಇಲಾಖೆ ಸೈಬರ್ ಇಲಾಖೆಯನ್ನು ಆಗ್ರಹಿಸಿದ್ದು, ಸಾವಿನ ಹಿಂದಿನ ಯಾವುದೇ ಸಾಕ್ಷ್ಯಾಧರಗಳಿದ್ದವರು ಈ ಕೇಸಿನ ತನಿಖಾಧಿಕಾರಿಗಳಿಗೆ ಸಲ್ಲಿಸುವಂತೆ ಕೆಥೊಲಿಕ್ ಸಭಾ ವಿನಂತಿಸಿದೆ.
ದಿವಂಗತ ಫಾ|ಮಹೇಶ್ ಡಿಸೋಜಾರ ಅಸಹಜ ಸಾವಿನ ಹಿಂದಿನ ವಿಷಯಗಳ ಗೊಂದಲಗಳನ್ನು ದುರುಪಯೋಗಪಡಿಸುವವರ ವಿರುದ್ದ, ಧರ್ಮಕೇಂದ್ರ ಹಾಗೂ ಧರ್ಮಕ್ಷೇತ್ರದ ಧಾರ್ಮಿಕ ಮುಖಂಡರ ವಿರುದ್ದ ಆಧಾರ ರಹಿತ ಅವಹೇಳನಕಾರಿ ಕೃತ್ಯಗಳನ್ನು ಕೆಥೊಲಿಕ್ ಸಭಾ ವಿರೋಧಿಸುವುದರೊಂದಿಗೆ ಖಂಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.