ವಿಟ್ಲ, ನ 8 (Daijiworld News/MSP): ಅನರ್ಹ ಶಾಸಕರು ನಮ್ಮ ಅಳಿಯಂದಿರು. ಎಲ್ಲಾ ಶಾಸಕರಿಗೆ ಕೊಡುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಅನರ್ಹ ಶಾಸಕರಿಂದಾಗಿಯೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು. ಅವರ ಏನೂ ಬೇಡಿಕೆ ಹೇಳುತ್ತಾರೋ ಅದನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಅವರು ಶುಕ್ರವಾರ ಪೆರಾಜೆ ಗ್ರಾಮದ ಮಾಣಿ ಮತ್ತು ಇತರೆ 51 ಜನವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕವನ್ನು ಲೋಕಾರ್ಪಣೆ ಮಾಡಿ ಮಾಧ್ಯಮಗಳ ಜತೆಗೆ ಮಾತನಾಡಿದರು.
ಟಿಪ್ಪು ಬಗ್ಗೆ ಗೊಂದಲ ಸೃಷ್ಠಿಸಿದ್ದೇ ಕಾಂಗ್ರೇಸಿಗರು ಮತ್ತು ಸಿದ್ದರಾಮಯ್ಯ. ಟಿಪ್ಪು ಜಯಂತಿಯನ್ನು ಮಾಡಿ ಎಂದು ಯಾರೂ ಕೇಳಿಲ್ಲ. ಈಗ ಇಬ್ರಾಹಿಂ ಸೇರಿ ಎಲ್ಲರೂ ಬೇಡ ಎನ್ನುತ್ತಿದ್ದಾರೆ. ಹಿಂದೂ ಮುಸ್ಲಿಮರು ನೆಮ್ಮದಿಯಿಂದ ಜೀವನ ನಡೆಸುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ. ಇದರಿಂದ ಟಿಪ್ಪು ಜಯಂತಿಗೆ ಕೈ ಹಾಕಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಇಂಜಿನೀಯರ್ ನರೇಂದ್ರ ಬಾಬು, ಜಿಪಂ, ತಾಪಂ, ಗ್ರಾಪಂನ ಸದಸ್ಯರು ಭಾಗವಹಿಸಿದ್ದರು.