ಮಂಗಳೂರು, ನ.09(Daijiworld News/SS): ನನಗೆ ಯಡಿಯೂರಪ್ಪ, ಸಿದ್ದರಾಮಯ್ಯ ಮೇಲೆ ಯಾವುದೇ ಶತ್ರುತ್ವ ಇಲ್ಲ ಜೆ.ಡಿ.ಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ 15 ಕಡೆಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ. ತೃಪ್ತಿಕರವಾದ ಫಲಿತಾಂಶ ಬರುತ್ತದೆ ಎಂಬುದು ನನ್ನ ನಂಬಿಕೆ. ಬಿಜೆಪಿ ಜೊತೆಗೆ ಮೈತ್ರಿ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ಜೊತೆಗೆ ಮೈತ್ರಿ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಲಾಗುವುದು. ಉಪಚುನಾವಣೆ ಫಲಿತಾಂಶ ಬಂದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೆ ಎಂದು ನೋಡುತ್ತೇನೆ ಎಂದು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಿಂದ ನಮ್ಮ 16 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ನನಗೂ ಮಂಗಳೂರಿಗೂ ಒಂದು ಅವಿನಾಭಾವ ಸಂಬಂಧ ಇದೆ. ಚುನಾವಣೆಯಲ್ಲಿ ನಾವು ಯಾರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ. ನಮ್ಮ ಶಕ್ತಿ ಎಷ್ಟಿದೆಯೋ ಅಷ್ಟು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್'ನಲ್ಲಿದೆ. ಒಂದು ವೇಳೆ ಚುನಾವಣೆ ಬಂದರೂ ನಾವು ಸ್ವತಂತ್ರವಾಗಿ ಸ್ಫರ್ಧಿಸುತ್ತೇವೆ. ಈ ಹಿಂದೆಯೂ ನಾನು ಮೈತ್ರಿಗೆ ಮೊದಲು ಒಪ್ಪಿರಲಿಲ್ಲ. ಸೋನಿಯಾ ಗಾಂಧಿ, ಗುಲಾಂ ನಬಿ ಆಝಾದ್ ನನ್ನನ್ನು ಸಂಪರ್ಕಿಸಿದ್ದರು. ಕೊನೆಗೆ ಕುಮಾರಸ್ವಾಮಿಯನ್ನು ಮನವೊಲಿಸಿ ಅಧಿಕಾರಕ್ಕೇರಿಸಿದರು. ನಂತರ ಏನೆಲ್ಲಾ ಆಯಿತು ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ ಎಂದು ಹೇಳಿದರು.
ಡಿಸೆಂಬರ್ ತಿಂಗಳ ಒಳಗೆ ರಾಜ್ಯದಲ್ಲಿ ನಾನು ಪಕ್ಷ ಸಂಘಟಿಸಲು ಪ್ರವಾಸ ಮಾಡುತ್ತೇನೆ. ಮುಂದೆ ನಾವು ಮೈತ್ರಿ ಮಾಡುವ ಯೋಚನೆ ಮಾಡಲ್ಲ ಎಂದು ಹೇಳಿದರು.