ಮಂಗಳೂರು, ನ 9 (Daijiworld News/MSP): ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ನಾವೆಲ್ಲರೂ ಬದ್ದರಾಗಿದ್ದು, ಈ ತೀರ್ಪನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ದೇಶದ್ರೋಹಿಗಳು ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.
ಅವರು ನಗರದಲ್ಲಿ ನ. 09 ರ ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಸುಪ್ರೀಂ ಕೋರ್ಟ್ ನ ತೀರ್ಪಿಗೆ ನಾವು ಬದ್ದರಾಗಿದ್ದೇವೆ, ತೀರ್ಪು ಯಾವುದೇ ಸಮುದಾಯದ ಪರ -ವಿರೋಧವಲ್ಲ, ದೇಶದ ಸಂಪತ್ತು, ರಾಷ್ಟ್ರಕ್ಕೆ ಸೇರಿದ ತೀರ್ಪು ಅದನ್ನು ಪಾಲಿಸಬೇಕು. ತೀರ್ಪನ್ನು ರಾಜಕೀಯಗೊಳಿಸಿದವರು ನಿಜವಾದ ದೇಶದ್ರೋಹಿಗಳು. ತೀರ್ಪನ್ನು ಮುಂದಿಟ್ಟುಕೊಂಡು ರಾಜಕೀಯ ಆಟ ಬೇಡ ಎಂದು ಹೇಳಿದರು
ಪಾಲಿಕೆಯ ಚುನಾವಣೆಯ ವಿಚಾರವಾಗಿ ಮಾತನಾಡಿದ ಅವರು, ”ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಉತ್ತರಿಸುತ್ತಾರೆ. ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿದೆ" ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಜನಮೆಚ್ಚುಗೆ ಗಳಿಸಲು ಸಾಧ್ಯವಾಗಿದೆ. ಬಿಜೆಪಿಗರಿಗೆ ಮಂಗಳೂರಿನ ಅಭಿವೃದ್ಧಿಯ ಬಗ್ಗೆ ವಿಶಾಲ ದೃಷಿಕೋನವಿಲ್ಲ. ಬಿಜೆಪಿ ಶಾಸಕರು ತಮ್ಮದೇ ಸರ್ಕಾರವಿದ್ದರೂ ನಗರಕ್ಕೆ ಯಾವುದೇ ವಿಶೇಷ ಅನುದಾನ ತಂದಿಲ್ಲ ಎಂದು ಆರೋಪಿಸಿದರು.