ಕುಂದಾಪುರ: ಇನ್ನೋವಾ ಕಾರಿನೊಳಗೆ ತಳ್ಳಿ ಮೂರು ಜಾನುವಾರು ಕಳವು - ಸಿಸಿಟಿವಿಯಲ್ಲಿ ಸೆರೆ
Sat, Nov 09 2019 05:36:59 PM
ಕುಂದಾಪುರ, ನ 9 (Daijiworld News/MSP): ಕರಾವಳಿಯಲ್ಲಿ ಜಾನುವಾರು ಕಳವು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕಕಾರಿ ಘಟನೆಗಳು ನಡೆಯುತ್ತಿವೆ. ಕೆಲವು ದಿನಗಳ ಹಿಂಪಾರಿನ ಪೆಟ್ರೋಲ್ ಬಂಕ್ ಸಮೀಪ, ನೇರಳಕಟ್ಟೆ, ಗುಲ್ವಾಡಿ ಎಂಬಲ್ಲಿ ರಾತ್ರೋ ರಾತ್ರಿ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಅಪಹರಿಸಿದ್ದು ಬೆಳಕಿಗೆ ಬರುತ್ತಿದ್ದಂತೆ ಇದೀಗ ಮೊಳಹಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ನ.8 ರ ಶುಕ್ರವಾರ ತಡರಾತ್ರಿ ಘಟನೆ ನಡೆದಿದ್ದು, ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕೆಮೆರಾದಲ್ಲಿ ಪ್ರಕರಣ ದಾಖಲಾಗಿದೆ.
ತಡರಾತ್ರಿ ಕಪ್ಪು ಅಥವಾ ಗಾಢನೀಲಿ ಬಣ್ಣದ ಇನ್ನೋವಾ ಕಾರೊಂದು ಬಂದು ನಿಲ್ಲುತ್ತದೆ. ಅದರಿಂದ ಇಬ್ಬರು ಇಳಿಯುತ್ತಾರೆ. ಬಳಿಕ ಸಮೀಪದಲ್ಲಿದ್ದ ಒಂದು ಜಾನುವಾರನ್ನು ಕಾರಿನ ಢಿಕ್ಕಿ ತೆರೆದು ಒಳಕ್ಕೆ ತಳ್ಳಲಾಗುತ್ತದೆ. ಬಳಿಕ ಇನ್ನೋವಾ ಮುಂದಕ್ಕೆ ಚಲಿಸಿ ತಿರುಗಿ ವಾಪಾಸ್ಸು ಬಂದು ನಿಲ್ಲುತ್ತದೆ ಬಳಿಕ ಮತ್ತೆ ಎರಡು ಜಾನುವಾರುಗಳನ್ನು ಒಂದರ ಬಳಿಕ ಇನ್ನೊಂದರಂತೆ ತುಂಬಿಸುವುದು ಕ್ಯಾಮರಾದಲ್ಲಿ ದಾಖಲಾಗಿದೆ.
ಈ ಬಗ್ಗೆ ಪೊಲೀಸರು ಸಿಸಿಟಿ ಫೂಟೇಜನ್ನು ಪಡೆದು ಪರಿಶೀಲಿಸಿದ್ದಾರೆ. ಆದರೆ ಇದುವರೆಗೆ ಯಾರೂ ಈ ಬಗ್ಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಬೀದಿ ಬದಿಯಲ್ಲಿಯೇ ಮಲಗುವ ಬಿಡಾಡಿ ಜಾನುವಾರುಗಳನ್ನು ಕಳೆದ ಕೆಲವು ತಿಂಗಳುಗಳಿಂದ ಸುಸಜ್ಜಿತ ವಾಹನಗಳಲ್ಲಿ ಕದ್ದೊಯ್ಯುವ ದುಷ್ಕರ್ಮಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.