ಬಂಟ್ವಾಳ, ನ 09 (DaijiworldNews/SM): ಮಂಗಳೂರು ತಾಲೂಕು ವ್ಯಾಪ್ತಿಗೆ ಒಳಪಡುವ ಮುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಮುಲಾರಪಟ್ನ ಸಂಪರ್ಕ ಕಲ್ಪಿಸುವ ಮುಲಾರಪಟ್ನ ನೂತನ ಸೇತುವೆಯ ನಿರ್ಮಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಮುರಿದು ಬಿದ್ದ ಹಳೆಯ ಸೇತುವೆಯನ್ನು ತೆರವುಗೊಳಿಸುವ ಕಾರ್ಯ ಸೋಮವಾರ ಆರಂಭಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, 7 ಮೀ ಇದ್ದ ಹಳೆಯ ಸೇತುವೆಯನ್ನು ಪ್ರಸ್ತುತ 12 ಮೀ ಅಗಲಕ್ಕೆ ಏರಿಸಿ 13.9 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಕ್ಯಾಬಿನೆಟ್ ಅನುಮೋದನೆ ಬಾಕಿ ಇದ್ದು, ಅನುಮೋದನೆ ಸಿಕ್ಕಿದಾಕ್ಷಣ ನೂತನ ಸೇತುವೆಯ ಕಾಮಗಾರಿ ಅರಂಬಗೊಳ್ಳಲಿದೆ ಎಂದರು.
ಮಳೆಗಾಲ ಆರಂಭವಾಗುವ ಮುನ್ನ ಈ ಸೇತುವೆ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಅಲೋಚಿಸಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರ ಅನುದಾನ 2 ಕೋಟಿ ರೂಪಾಯಿಹಾಗೂ ಮಂಗಳೂರು ಶಾಸಕ ಡಾ. ವೈ ಭರತ್ ಶೆಟ್ಟಿ ಅವರ 2 ಕೋಟಿ ಅನುದಾನವನ್ನು ಈ ಸೇತುವೆಗೆ ಮೀಸಲಿಡಲಾಗಿದ್ದು ಶೀಘ್ರವಾಗಿ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.