ಬೆಂಗಳೂರು ಜ 10 : ದ್ವಿಚಕ್ರ ವಾಹನ ಸವಾರರೇ ಎಚ್ಚರ..! ಇನ್ನು ನೀವು ಧರಿಸುವ ಹೆಲ್ಮೆಟ್ ನಲ್ಲಿ ಐಎಸ್ಐ ಮುದ್ರೆ ಇಲ್ಲದೆ ಹೋದರೆ, ಅಪಘಾತವಾದಾಗ ವಿಮೆ ಹಣವೂ ಸಿಗದು. ಹೌದು ಇಂತಹ ಮಹತ್ವ ದ ತೀರ್ಪನ್ನು
ಹೈಕೋರ್ಟ್ ಪ್ರಕಟಿಸಿದೆ. ‘ದ್ವಿಚಕ್ರ ವಾಹನ ಸವಾರರು ಐಎಸ್ಐ ಮುದ್ರೆ ಇರುವ ಹೆಲ್ಮೆಟ್ ಧರಿಸದೇ ಅಪಘಾತಕ್ಕೀಡಾಗಿ ಜೀವ ಕಳೆದುಕೊಂಡರೆ ಅಥವಾ ಅಂಗ ವೈಕಲ್ಯಕ್ಕೀಡಾದರೆ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಹಾಕದಿದ್ದರೆ ವಿಮಾ ಕಂಪನಿ ವಿಮಾ ಹಣ ಪಾವತಿಸಬಾರದು’ ಎಂದು ಏಕಸದಸ್ಯ ನ್ಯಾಯಪೀಠ ತೀರ್ಪು ಪ್ರಕಟಿಸಿದೆ. ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಎಂಎಫ್ಎ (ಮಿಸಲೇನಿಯಸ್ ಫಸ್ಟ್ ಅಪೀಲ್) ಅರ್ಜಿ ಮೇಲಿನ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ಎಲ್.ನಾರಾಯಣ ಸ್ವಾಮಿ ಅವರ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.
‘ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೊ ಒಂದು ಹೆಲ್ಮೆಟ್ ಅನ್ನು ಹಾಕಿಕೊಳ್ಳುವುದಲ್ಲ. ಮೋಟಾರು ವಾಹನ ಕಾಯ್ದೆ–1988ಕ್ಕೆ (ಕೆಎಂವಿ) ಸಂಬಂಧಿಸಿದ ನಿಯಮ 230ರ ಪ್ರಕಾರ ರಕ್ಷಣಾತ್ಮಕ ಹೆಲ್ಮೆಟ್ ಅನ್ನೇ ಧರಿಸಬೇಕು. ‘ಕೆಎಂವಿ ಕಾಯ್ದೆ ಕಲಂ 129ರ ಅನುಸಾರ ಹಿಂಬದಿ ಸವಾರರೂ ಸೇರಿದಂತೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಇದನ್ನು ಪರಿಶೀಲಿಸಬೇಕಾದ್ದು ಸಂಚಾರ ಪೊಲೀಸರ ಕರ್ತವ್ಯ’ ಎಂದು ತಿಳಿಸಲಾಗಿದೆ.‘ಮೊದಲು ಈ ನಿಯಮ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿಯಲ್ಲಿ ಮಾತ್ರವೇ ಅನ್ವಯವಾಗುತ್ತಿತ್ತು. ಆದರೆ, ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ವ್ಯಾಪ್ತಿಗೂ ಅನ್ವಯವಾಗುತ್ತದೆ’ ಎಂದು ಹೇಳಲಾಗಿದೆ. ಪಾವಗಡ ತಾಲ್ಲೂಕಿನ ಓಬಳಾಪುರ ಗ್ರಾಮದ ಎನ್.ನರೇಶ್ ಬಾಬು ಮತ್ತು ಸಿ.ವಿ.ಜಯಂತ್ ಎಂಬುವರು 2014ರ ಮೇ 20ರಂದು ಬಜಾಜ್ ಪಲ್ಸರ್ ಬೈಕ್ನಲ್ಲಿ ಹೋಗುತ್ತಿರುವಾಗ ಬಸ್ ಡಿಕ್ಕಿಯಾಗಿ ಅಪಘಾತಕ್ಕೆ ಒಳಗಾಗಿದ್ದರು. ಅವರಿಗೆ ಪರಿಹಾರವಾಗಿ ವಿಮಾ ಕಂಪನಿ ₹2.58 ಲಕ್ಷ ನೀಡಬೇಕು ಎಂದು ಮಧುಗಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಆದೇಶಿಸಿದ್ದರು. ಇದನ್ನು ವಿಮಾ ಕಂಪೆನಿ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು.