ಉಡುಪಿ, ನ 09 (DaijiworldNews/SM): ಇಂದು ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಜನತೆಯ ಭಾವನೆಗಳು ಮತ್ತು ನಂಬಿಕೆಗಳಿಗೆ ಸಿಕ್ಕ ಗೌರವ ಎಂದು ಭಾವಿಸಬಹುದು. ಶತಮಾನದಿಂದ ನಡೆಯುತಿದ್ದ ಕಾನೂನು ಹೋರಾಟಕ್ಕೆ ಇವತ್ತು ಸುಪ್ರಿಂ ಕೋರ್ಟ್ ಅಂತಿಮ ತೆರೆ ಎಳೆದಿದೆ ಎಂದು ಕರ್ನಾಟಕ ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು "ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಈ ತೀರ್ಪನ್ನು ಸ್ವಾಗತಿಸಿವೆ. ಇಡೀ ಭಾರತದೆಲ್ಲೆಡೆ ಸುಪ್ರಿಂ ಕೋರ್ಟ್ ನ ನಿರ್ಣಯದ ಸ್ವೀಕೃತಿಯನ್ನು ಎತ್ತಿ ತೋರಿಸುವಂತಹ ಭಾವನೆಗಳು ಕಾಣುತ್ತಿವೆ. ಭಾರತೀಯ ಜನತಾ ಪಕ್ಷದ ಪರವಾಗಿ ಈ ತೀರ್ಪನ್ನು ನಾನು ಸ್ವಗತಿಸುತ್ತೇನೆ. ದೇಶದೆಲ್ಲೆಡೆ ಈ ತೀರ್ಪನ್ನು ಸರ್ವರೂ ಗೌರವಿಸಬೇಕು, ಇಡೀ ದೇಶ ಒಂದು ಎಂಬ ಭಾವನೆಯನ್ನು ಎತ್ತಿ ತೋರಿಸೋಣ" ಎಂದು ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಅಯೋಧ್ಯೆಯಲ್ಲಿನ ವಿವಾದ ಶತಮಾನದ ವಿಚಾರವಾಗಿತ್ತು. ಈ ಬಗ್ಗೆ ದೇಶದ ಜನತೆ ಕುತೂಹಲದಿಂದಲೇ ಸುಪ್ರೀಂನತ್ತ ಮುಖಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪು ಯಾರ ಪರ ಬರಲಿದೆ ಎಂಬ ಕುತೂಹಲ ಮನೆ ಮಾಡಿತ್ತು. ಆದರೆ, ಅಂತಿಮವಾಗಿ ತೀರ್ಪು ಪ್ರಕಟಗೊಂಡಿದ್ದು, ದೇಶದ ಜನತೆ ಸುಪ್ರೀಮ್ ತೀರ್ಪನ್ನು ಸ್ವಾಗತಿಸಿದ್ದಾರೆ.