ಉಡುಪಿ, ನ 11(Daijiworld News/MSP): ಬಾಬ್ರಿ ಮಸೀದಿ - ಹಾಗೂ ರಾಮ ಜನ್ಮ ವಿವಾದಿತ ಭೂಮಿಯ ತೀರ್ಪಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶನಿವಾರ ಜಿಲ್ಲಾಡಳಿತ ವಿಧಿಸಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಉಡುಪಿ ಜಿಲ್ಲಾಧಿಕಾರಿಗಳಿಗೆ ಭಾನುವಾರ ಸಲ್ಲಿಕೆ ಮಾಡಲಾಗಿದೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಜಾನುವಾರುಕಟ್ಟೆ ಎಂಬಲ್ಲಿ ಯುವಕರ ತಂಡವೊಂದು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಈ ಕುರಿತು ಎಸ್ಪಿ ನಿಶಾ ಜೇಮ್ಸ್ ಅವರಿಗೆ ದೂರು ಬಂದಿತ್ತು ಎನ್ನಲಾಗಿದೆ. ಅದರಂತೆ ಎಸ್ಪಿ ಈ ವಿಡಿಯೋ ಸಹಿತ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
"ನಿಷೇಧಾಜ್ಞೆ ಉಲ್ಲಂಘನೆ ಮಾಡಿರುವ ಸಂಬಂಧ ನ್ಯಾಯಾಲಯದ ಮೂಲಕ ಖಾಸಗಿ ದೂರು ದಾಖಲಿಸಲಾಗುತ್ತದೆ ಅದರಂತೆ ಘಟನೆ ಸಂಭವಿಸಿದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿ ಕ್ರಮಕೈಗೊಳ್ಳಲಿದ್ದಾರೆ" ಎಂದು ಎಸ್ಪಿ ನಿಶಾ ಜೇಮ್ಸ್ ಮಾಹಿತಿ ನೀಡಿದ್ದಾರೆ.