ಉಳ್ಳಾಲ ಜ 10: ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಕೊಟ್ಟಾರಚೌಕಿಯಲ್ಲಿ ಆಕಾಶಭವನನಿವಾಸಿ ಬಶೀರ್ ಹತ್ಯೆ ನಡೆಸಿದ ಹಂತಕರು ಕೃತ್ಯ ಬಳಿಕ ಎಸೆದ ಮೊಬೈಲ್ ಮತ್ತು ಮಾರಕಾಸ್ತ್ರಗಳನ್ನು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದಿದ್ದು, ಈ ಕುರಿತ ಮಹಜರು ಎಸಿಪಿ ವೆಲಂಟೈನ್ ನೇತೃತ್ವದ ಪೊಲೀಸರ ತಂಡದಿಂದ ಜ ೧೦ ಬುಧವಾರ ನಡೆಯಿತು.
ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್ ಎಂಬವರನ್ನು ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ನಾಲ್ವರು ಬಶೀರ್ ಅವರನ್ನು ಕೊಟ್ಟಾರಚೌಕಿ ಬಳಿ, ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುವ ಸಂದರ್ಭ ತಡೆದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕಡಿದು ಕೊಲೆಗೆ ಯತ್ನಿಸಿದ್ದರು. ನಾಲ್ಕು ದಿನಗಳ ಬಳಿಕ ಎ.ಜೆ. ಆಸ್ಪತ್ರೆಯಲ್ಲಿ ಬಶೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಹತ್ಯೆಗೆ ಉಪಯೋಗಿಸಿದ ಮಾರಕಾಸ್ತ್ರ, ಮೊಬೈಲುಗಳನ್ನು ನಾಲ್ವರು ಆರೋಪಿಗಳು ನೇತ್ರಾವತಿ ಸೇತುವೆಯಿಂದ ನದಿಗೆ ಎಸೆದು ಕೇರಳದ ಮಂಜೇಶ್ವರ ಕಡೆಗೆ ಪರಾರಿಯಾಗಿದ್ದರು. ಬಂಧಿತರ ವಿಚಾರಣೆ ಕೈಗೊಂಡಾಗ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ತಣ್ಣೀರುಬಾವಿ ಮುಳುಗುತಜ್ಞರನ್ನು ಉಪಯೋಗಿಸಿಕೊಂಡು ಮಾರಕಾಸ್ತ್ರ ಮತ್ತು ಮೊಬೈಲಿಗೆ ಎಸಿಪಿ ನೇತೃತ್ವದ ಪೊಲೀಸರ ಹುಡುಕಾಟ ಮುಂದುವರಿಸಿದೆ. ನೇತ್ರಾವತಿ ಸೇತುವೆಯಲ್ಲಿ ಪೊಲೀಸರು ನೆರೆದಿರುವುದನ್ನು ಕಂಡು ಸಾರ್ವಜನಿಕ ವಲಯದಲ್ಲಿ ಆತ್ಮಹತ್ಯೆ ಪ್ರಕರಣ ಎಂದು ಸುದ್ಧಿ ಹಬ್ಬಿತ್ತು.