ಕುಂದಾಪುರ ಜ 10 : ಅಕ್ರಮವಾಗಿ ಡೀಮ್ಡ್ ಫಾರೆಸ್ಟ್ನಲ್ಲಿ ಗುಡಿಸಲುಗಳನ್ನ ಹಾಕಿದ್ದ 147 ಕುಟುಂಬಗಳನ್ನ ತಾಲೂಕು ಆಡಳಿತ ಪೊಲೀಸರ ಸಹಾಯದಿಂದ ತೆರವುಗೊಳಿಸಿದ ಘಟನೆ ಬುಧವಾರ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ಅಕ್ರಮವಾಗಿ ಗುಡಿಸಲು ಹಾಕಿಕೊಂಡು ವಾಸವಿದ್ದ ಕುಟುಂಬಗಳನ್ನ ತಹಶೀಲ್ದಾರ್ ಜಿ.ಎ ಬೋರ್ಕರ್ ಮತ್ತು ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ಘಟನೆ ಹಿನ್ನೆಲೆ
2017ರ ಅಕ್ಟೋಬರ್ 31 ರಂದು ರಾತ್ರಿ ಏಕಾಏಕಿ ಹತ್ತರಿಂದ ಹದಿನೈದು ಕುಟುಂಬಗಳಿ ಕುಟುಂಬಗಳು ಏಕಾಏಕಿ ಸರ್ವೆ ನಂ 157ರಲ್ಲಿ ಗುಡಿಸಲುಗಳನ್ನ ಹಾಕಿಕೊಂಡಿದ್ದವು. ಈ ವಿಚಾರ ತಿಳಿದ ತಹಶೀಲ್ದಾರ್ ಅಂದು ಬಂದು ಎಚ್ಚರಿಕೆ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದಲ್ಲದೆ ಲಿಖಿತ ನೋಟಿಸ್ ಕೂಡ ಜಾರಿಗೊಳಿಸಿದ್ದರು. ಆದರೂ ಕೂಡ ಇಲ್ಲಿಂದ ತೆರವುಗೊಳಿಸದೇ ಇದ್ದ ಕಾರಣ ಪೊಲೀಸರ ಸಹಕಾರದೊಂದಿಗೆ ತಹಶೀಲ್ದಾರ್ ಜೆಸಿಬಿ ತೆರವುಗೊಳಿಸಿದ್ದಾರೆ.
ಕೃಷಿಕೂಲಿಕಾರರ ಸಂಘಟನೆಯಿಂದ ವಿರೋಧ
ಕೃಷಿ ಕೂಲಿಕಾರರ ಸಂಘಟನೆಯ ಮುಖಂಡರು ಸ್ಥಳದಲ್ಲಿ ಒತ್ತುವರಿ ತೆರವುಗೊಳಿಸುತ್ತಿರುವುದನ್ನ ವಿರೋಧಿಸಿದ ಹಿನ್ನೆಲೆ, ಪ್ರತಿಭಟಿಸಿದವರನ್ನ ವಶಕ್ಕೆ ಪಡೆದು, ಕಂಡ್ಲೂರು ಠಾಣೆಯಲ್ಲಿ ಇರಿಸಲಾಗಿದೆ.
ವಿ.ಎ ವಿರುದ್ಧ ಅಕ್ರಮ ನಿವಾಸಿಗಳ ಆಕ್ರೋಶ
ಕಂದಾವರ ಗ್ರಾಮಪಂಚಾಯತ್ ವಿ.ಎ ನಿಮಗೆ ಇಲ್ಲಿ ಜಾಗ ನೀಡುತ್ತೇವೆ ಎಂದು ಹೇಳಿ ಸೋಮವಾರ ಸಹಿ ತೆಗೆದುಕೊಂಡಿದ್ದು, ಇಂದು ಬಂದು ತೆರವುಗೊಳಿಸುತ್ತಿದ್ದಾರೆ. ಅನಕ್ಷರಸ್ಥರಾದ ನಮ್ಮ ಬಳಿ ಸುಳ್ಳು ಹೇಳಿ ಸಹಿ ತೆಗೆದುಕೊಂಡಿದ್ದಾರೆ ಎಂದು ಗುಡಿಸಲು ಹಾಕಿಕೊಂಡವರು ಆರೋಪಿಸಿದರು.
ಇದ್ದವರು ಇಲ್ಲದವರು ಗುಡಿಸಲು ಹಾಕಿಕೊಂಡಿದ್ದರು?
ಕಂದಾವರದಲ್ಲಿ ಗುಡಿಸಲು ಹಾಕಿಕೊಂಡವರಲ್ಲಿ ಎಲ್ಲರೂ ನಿವೇಶನರಹಿತರಾಗಿರಲಿಲ್ಲ. ಹಲವು ಮಂದಿ ಆಸ್ತಿ ಪಾಸ್ತಿ ಇದ್ದವರೂ ಕೂಡ ಅಲ್ಲಿ ನಿವೇಶನಕ್ಕಾಗಿ ಗುಡಿಸಲು ಕಟ್ಟಿಕೊಂಡಿದ್ದರು ಎನ್ನುವುದು ಕಂಡು ಬಂತು. ಆದರೂ ನಿವೇಶನ ರಹಿತರ ಸಂಖ್ಯೆ ಹೆಚ್ಚಾಗಿತ್ತು.
ಬೆಂಕಿ ಹಾಕಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನ
ಘಟನಾ ಸ್ಥಳದಲ್ಲಿ ಕೆಲವು ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಹಾಕಿ, ಪ್ರಕರಣದ ದಿಕ್ಕುತಪ್ಪಿಸಲು ಯತ್ನಿಸಿದ ಘಟನೆ ಕೂಡ ನಡೆದಿದೆ. ತಕ್ಷಣ ಸ್ಥಳಕಕ್ಕಾಗಮಿಸಿದ ಅಗ್ನಿಶಾಮಕ ದಳ ನೀರು ಹಾಕಿ ಬೆಂಕಿ ನಂದಿಸಿದರು.
ಮುಖಂಡರ ವಿರುದ್ದ ಆಕ್ರೊಶ
ಕೆಲ ಮುಖಂಡರು ನಿವೇಶನ ಕೊಡಿಸುತ್ತೇನೆಂದು ಹಣವನ್ನ ತೆಗೆದುಕೊಂಡಿದ್ದು, ನಿವೇಶನನೂ ಇಲ್ಲ ಹಣವೂ ಇಲ್ಲ. ಎಂದು ಅಕ್ರಮ ನಿವಾಸಿಗಳು ದುಃಖಿಸುತ್ತಿರುವುದು ಕಂಡು ಬಂತು. ಸುಮಾರು ೭ಸಾವಿರ ರು. ಹಣವನ್ನ ಕೆಲ ಮುಖಂಡರೆನಿಸಿಕೊಂಡವರು ತೆಗೆದುಕೊಂಡಿರುವುದಾಗಿ ಆರೋಪಿಸಲಾಗಿದ್ದು. ಆದರೆ ಹಣ ತೆಗೆದುಕೊಂಡವರು ಮಾತ್ರ ಆ ಜಾಗದತ್ತ ಸುಳಿದೇ ಇಲ್ಲ ಎನ್ನುವ ಆರೋಪ ಕೂಡ ಕೇಳಿ ಬಂತು.
ಬಿಗಿ ಬಂದೋಬಸ್ತ್
ತೆರವು ಕಾರ್ಯಚರಣೆ ಹಿನ್ನೆಲೆ ಕಂದಾವರದಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜಿಸಲಾಗಿದ್ದು, ಕಂದಾವರಕ್ಕೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನ ಕೈಗೊಳ್ಳಲಾಗಿತ್ತು. ಡಿವೈಎಸ್ಪಿ ಪ್ರವೀಣ್ ನಾಯಕ್, ವೃತ್ತನಿರೀಕ್ಷಕ ಮಂಜಪ್ಪ, ಪಿಎಸ್ಐಗಳಾದ ಹರೀಶ್, ಶ್ರೀಧರ್ ನಾಯಕ್, ಶೇಖರ್, ಸುನೀಲ್ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.