ಮಂಗಳೂರು, ನ.12(Daijiworld News/SS): ರಾಜ್ಯದ ಎಲ್ಲಾ ದೇವಸ್ಥಾನಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಸೋಮನಾಥ ದೇವಸ್ಥಾನ ಕಡಲ ತಟದಲ್ಲಿ ರಮಣೀಯ ತಾಣದಲ್ಲಿದೆ. ಶಾಸಕರು, ಸಚಿವರುಗಳು ಒಟ್ಟಾಗಿ ಕೆಲಸ ಮಾಡಿದರೆ ಸೋಮೇಶ್ವರ ದೇವಸ್ಥಾನ ಪ್ರವಾಸೋದ್ಯಮ ತಾಣವಾಗಿ ಮಾರ್ಪಾಡು ಆಗುವುದರಲ್ಲಿ ಸಂಶಯವಿಲ್ಲ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಉಪಯೋಗಕ್ಕಾಗಿ ನೂತನವಾಗಿ ನಿರ್ಮಿಸಲಾದ ಶ್ರೀ ಸೋಮನಾಥ ಚಾವಡಿ ಸಭಾಭವನದ ಸೋಮವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ 34,500 ದೇವಸ್ಥಾನಗಳಿದ್ದು,196 ದೇವಾಲಯಗಳು 'ಎ' ಗ್ರೇಡ್, 225 ದೇವಸ್ಥಾನಗಳು ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದೆ. ಇತರ ದೇವಸ್ಥಾನಗಳ ಆದಾಯ ಹೆಚ್ಚಿಸಲು ಪ್ರಯತ್ನ ನಡೆಸಲಾಗಿದೆ. 33,000 ದೇವಸ್ಥಾನಗಳಿಗೆ ಎಣ್ಣೆ ಮತ್ತು ಬತ್ತಿಗೆ ವಾರ್ಷಿಕ 45 ಸಾವಿರ ಅನುದಾನ ನೀಡಲಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅಲ್ಲದೆ ದೇವಸ್ಥಾನಗಳಿಗೆ ಸಾವಿರ ಸಿಬ್ಬಂದಿ ನೇಮಕ ಮಾಡಿ ಪಾರದರ್ಶಕ ಆಡಳಿತ ನಡೆಸಲು ಯೋಜನೆ ರೂಪಿಸಲಾಗಿದ್ದು, ಈ ಮೂಲಕ ಆದಾಯ ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ಯು.ಟಿ.ಖಾದರ್ ಮಾತನಾಡಿ, ಕ್ಷೇತ್ರ ಅತ್ಯಂತ ಅಭಿವೃದ್ಧಿ ಹಾಗೂ ಅತ್ಯಂತ ಪಾವಿತ್ರ್ಯ ಆಗಬೇಕು ಎನ್ನುವ ಕನಸಿನಂತೆ ಕೆರೆಗೆ ಒಂದು ಕೋಟಿ ಹಾಗೂ ರಸ್ತೆ ದ್ವಿಪಥಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ದೇವಸ್ಥಾನ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಡಾಂಬರು ಮತ್ತು ಕಾಂಕ್ರೀಟ್'ನಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಕ್ಷೇತ್ರದ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಕ್ಷೇತ್ರದ ಪ್ರಧಾನ ಅರ್ಚಕ ಸೂರ್ಯನಾರಾಯಣ ಹೊಳ್ಳ, ತಾ.ಪಂ.ಅಧ್ಯಕ್ಷ ಮಹಮ್ಮದ್ ಮೋನು, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ರವೀಂದ್ರನಾಥ ರೈ, ಉದ್ಯಮಿ ಜನಾರ್ದನ ಹೊಳ್ಳ, ನಿವೃತ್ತ ಸೈನಿಕ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಮುಖ್ಯ ಅತಿಥಿಗಳಾಗಿದ್ದರು. ಪ್ರಧಾನ ಕಾರ್ಯದರ್ಶಿ ರಾಘವ ಆರ್.ಉಚ್ಚಿಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸುಧಾಕರ ಭಂಡಾರಿ, ರಮೇಶ್ ಕೊಲ್ಯ, ರುಕ್ಮಯ ಬಂಗೇರ, ಯು.ಸೋಮಯ್ಯ, ಪ್ರತಿಭಾ ಯು.ಎಸ್., ಲಕ್ಷ್ಮೀ ಪೂಜಾರಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಸ್ವಾಗತಿಸಿದರು. ರಮಾನಾಥ ಬಂಗೇರ ಕಾರ್ಯಕ್ರಮ ನಿರೂಪಿಸಿದರು.