ಮಂಗಳೂರು, ನ 12 (Daijiworld News/MSP): ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಂದಿನ 5 ವರ್ಷಗಳ ಕಾಲ ತಮ್ಮ ವಾರ್ಡ್ ಅನ್ನು ಯಾರು ಪ್ರತಿನಿಧಿಸಬೇಕು, ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಜನತೆ ನೀಡಿದ 60 ವಾರ್ಡ್ ಗಳ ಜನಾದೇಶ ಮತಯಂತ್ರದಲ್ಲಿ ಭದ್ರವಾಗಿದೆ.
ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯಗೊಂಡಿದೆ. ಪಾಲಿಕೆ ವ್ಯಾಪ್ತಿಯ 445 ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಮಂದಗತಿಯಲ್ಲಿ ಸಾಗಿದ ಮತದಾನವು ನೀರಸವಾಗಿಯೇ ಮುಕ್ತಾಯಗೊಂಡಿದೆ.
ಒಂದೆರಡು ವಾರ್ಡ್ ಗಳಲ್ಲಿ ಮಾತಿನ ಚಕಮಕಿ ಬಿಟ್ಟರೆ ಬೇರೆಲ್ಲೆಡೆ ಯಾವುದೇ ಅಹಿತಕರ ಘಟನೆಗಳಿಲ್ಲದೆ, ಮತದಾನ ಶಾಂತಿಯುತವಾಗಿಯೇ ಮುಕ್ತಾಯಗೊಂಡಿದೆ. 60 ವಾರ್ಡ್ ಗಳ 180 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ನ.14 ರಂದು ಫಲಿತಾಂಶ ಹೊರಬೀಳಲಿದೆ. ಸ್ಟೇಟ್ ಬ್ಯಾಂಕ್ ಬಳಿಯ ರೋಸಾರಿಯೋ ಹೈಸ್ಕೂಲ್ ನಲ್ಲಿ ಮತಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮಧ್ಯಾಹ್ನದ 1 ಗಂಟೆ ಒಳಗೆ ಮತಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.