ಕಾರ್ಕಳ, ನ 12 (Daijiworld News/MSP): ತಾಯಿ ಮತ್ತು ಮಕ್ಕಳ ವಿಶೇಷ ೮ ಆಸ್ಪತ್ರೆಗಳನ್ನು ಮಂಜೂರು ಮಾಡುವಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆ 8 ಆಸ್ಪತ್ರೆಗಳ ಪೈಕಿ 1ನ್ನು ಕಾರ್ಕಳಕ್ಕೆ ಮಂಜೂರು ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಉಪವಿಭಾಗ ಮಂಗಳೂರು ಇದರ ಜಂಟೀ ಆಶ್ರಯದಲ್ಲಿ ನಿರ್ಮಾಣಗೊಂಡಿರುವ 100 ಹಾಸಿಗೆಗಳ ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ದೀಪ ಪ್ರಜ್ವಲನೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಜನಔಷಧಿ ಕೇಂದ್ರಗಳನ್ನು ಕಡ್ಡಾಯವಾಗಿ ತೆರೆಯಲು ಕ್ರಮ, ಸರಕಾರಿ ಆಸ್ಪತ್ರೆಗಳು ಸುಧಾರಣೆಗೊಳ್ಳಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮುಂದಾಗುವ ವೈದ್ಯರಿಗೆ ನೇರ ನೇಮಕಾತಿ, ಎನ್ಆರ್ಎಚ್ಎಂ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ವೇತನವನ್ನು ಹೆಚ್ಚಳ ಮಾತ್ರವಲ್ಲದೇ ಖಾಯಂ, ರಾಜ್ಯ ಸರಕಾರದಡಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವವರಿಗೆ ಖಾಯಂಗೊಳಿಸುವುದು. ಶಾಸಗಿ ಆಸ್ಪತ್ರೆಗಳೊಂದಿಗೆ ಸರಕಾರಿ ಆಸ್ಪತ್ರೆಗಳು ಸ್ವರ್ಧಾತ್ಮಕವಾಗಿ ಸೇವೆ ನೀಡುವಂತಾಗಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಸಲುವಾಗಿ ಸಿಸಿ ಕ್ಯಾಮರಗಳು ಕಡ್ಡಾಯವಾಗಿ ಅಳವಡಿಸುವುದು ಹಾಗೂ ಪೊಲೀಸ್ ಹೊರ ಠಾಣೆ ತೆರೆಯುವ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರವು ನಾಗರಿಕರ ಹಿತದೃಷ್ಠಿಯನ್ನು ಮುಂದಿಟ್ಟು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವ ಮೆಚ್ಚಿಕೊಂಡಿದೆ. ಕುಟುಂಬವೊಂದು ಬಡತನಕ್ಕೆ ಬರಲು ಅನಾರೋಗ್ಯ ಮತ್ತು ಸಾಲವೇ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವಯೋಜನೆಗಳನ್ನು ಜಾರಿಗೊಳಿಸಿದೆ. ಒಬ್ಬ ಸಂಸದನಿಗೆ ತಿಂಗಳೊಂದಕ್ಕೆ ಅನಾರೋಗ್ಯ ಪೀಡಿತ ಇಬ್ಬರಿಗೆ ಪರಿಹಾರ ಒದಗಿಸಬಹುದಾಘಿದೆ. ಆದರೆ ಪ್ರತಿ ತಿಂಗಳು ಕ್ಷೇತ್ರ ವ್ಯಾಪ್ತಿಯಲ್ಲಿ 25ಕ್ಕೂ ಮಿಕ್ಕಿ ಅನಾರೋಗ್ಯ ಪೀಡಿತರು ಕೇಂದ್ರ ಸರಕಾರದ ಪರಿಹಾರಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ಅದಲ್ಲದೇ ರಾಜ್ಯ ಸರಕಾರಕ್ಕೂ ಮನವಿ ಸಲ್ಲಿಸುತ್ತಿದ್ದಾರೆ. ಇದೊಂದು ಗಂಭೀರ ವಿಚಾರವಾಗಿದೆ. ಈ ಸಮಸ್ಸೆಗೆ ಬಗೆಹರಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಯೋಜನೆ ಪರಿಣಾಮಕಾರಿಯಾಗಿದೆ ಎಂದರು.
ಆಯುಷ್ಮಾನ್ ಯೋಜನೆ ಇತರ ರಾಜ್ಯದಲ್ಲಿ ಯಶಸ್ಸು ಆಗಿ ನಡೆಯುತ್ತಿದ್ದರೂ ಕರ್ನಾಟಕದಲ್ಲಿ ಅದರ ಯಶಸ್ಸಿಗೆ ಹಿನ್ನಡೆಯಾಗಿತ್ತು. ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಪ್ರಸ್ತುತ ಬಿಜೆಪಿ ಸರಕಾರ ಮುಂದಡಿ ಇಟ್ಟಿದೆ ಎಂದರು. ಆಯುಷ್ಮಾನ್ ಯೋಜನೆಯಲ್ಲಿ ೩ ಎ ರದ್ದು ಪಡಿಸಿದಾಗ ಜನತೆ ಅದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಈ ಬಗ್ಗೆ ವೇದಿಕೆಯಲ್ಲಿಯೇ ಆರೋಗ್ಯ ಸಚಿವ ಶ್ರೀರಾಮುಲು ಅವರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮನವಿ ಮಾಡಿಕೊಂಡರು.
ಸ್ವಚ್ಚ ಕಾರ್ಕಳ ಸುಂದರ ಕಾರ್ಕಳ:
ಸ್ವಚ್ಛ ಭಾರತ ಇದರ ಅಂಗವಾಗಿ ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ನೃತೃತ್ವದಲ್ಲಿ ಸ್ವಚ್ಛ ಕಾರ್ಕಳ, ಸ್ವರ್ಣ ಕಾರ್ಕಳ ಘೋಷವಾಕ್ಯದೊಂದಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಪ್ಲಾಸ್ಟಿಕ್ ಮುಕ್ತ ಕಾರ್ಕಳವನ್ನಾಗಿ ಮಾಡುವಲ್ಲಿ ಪಟತೊಟ್ಟಿದ್ದಾರೆ. ಅದಕ್ಕೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಸ್ವಚ್ಛತೆ ಕಾಪಾಡಿದಾಗ ಪರಿಪೂರ್ಣ ಆರೋಗ್ಯ ಕಾಣಲು ಸಾಧ್ಯವೆಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಹಾಗೂ ವಿಧಾನಸಭಾ ಆಡಳಿತ ಪಕ್ಷದ ಮುಖ್ಯಸಚೇತಕ ವಿ.ಸುನೀಲ್ಕುಮಾರ್ ಮಾತನಾಡಿ, ರೂ.೮.೭೫ ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾದ ಹಾಗೂ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ತಾಲೂಕು ಸರಕಾರಿ ಆಸ್ಪತ್ರೆ ನಿರ್ಮಾಣಗೊಂಡಿದೆ. ಇದರು ಇತರ ಕ್ಷೇತ್ರಗಳಿಗೆ ಮಾದರಿಯಾಗಿದ್ದು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರಿಗೂ ಇದರ ಪ್ರಯೋಜನ ಪಡೆಯಲಿದ್ದಾರೆ. 11 ಮಂದಿ ವೈದ್ಯರು, 3 ಮಂದಿ ಆಯುಷ್ಮಾನ್ ವೈದ್ಯರು 47 ನರ್ಸ್ಗಳು, ಎಲ್ಲ ಹುದ್ದೆಗಳು ಭರ್ತಿಗೊಂಡಿದೆ. ಸಾರ್ವಜನಿಕರೊಂದಿಗೆ ಎಲ್ಲ ರೀತಿಯ ಸಹಕಾರದೊಂದಿಗೆ ಯಾವುದೇ ದೂರು ಬಾರದಂತೆ ಇದೇ ಸಂದರ್ಭದಲ್ಲಿ ವೈದ್ಯರಿಗೆ ಶಾಸಕರು ಸಲಹೆನೀಡಿದರು.
ಎರಡು ಕೊರತೆಗಳು ಇಲ್ಲಿ ಕಾಡುತ್ತಿತ್ತು. ಅಂಬುಲೆನ್ಸ್ ಹಾಘೂ ರಕ್ತ ಪರೀಕ್ಷಾ ಕೇಂದ್ರಕ್ಕೆ ಕಾರ್ಕಳ ರೋಟರಿ ಕ್ಲಬ್ ರೂ.40 ಲಕ್ಷ ನೆರವು ನೀಡಿದೆ. ಕೀಲು ಮತ್ತು ಎಲುಬು ಶಸ್ತ್ರಚಿಕಿತ್ಸಾ ಸಲಕರಣೆಗೆ ಎಂಸಿಎಫ್ ರೂ. 10 ಲಕ್ಷ ನೆವಿನ ಭರವಸೆ ನೀಡಿದೆ ಎಂದರು.
ಹೊರರೋಗಿಗಳಾಗಿ 99,271 ಮಂದಿ, 725 ಮಂದಿ ಹೆರಿಗೆ, 69 ಮಂದಿಗೆ ದೊಡ್ಡ ಶಸ್ತ್ರ ಚಿಕಿತ್ಸೆ, 500 ಸಣ್ಣ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ. ತಾಲೂಕಿಗೆ ನೂತನವಾಗಿ ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆ ಮಂಜೂರು ಮಾಡುವಂತೆ ಇದೇ ಸಂದರ್ಭದಲ್ಲಿ ಶಾಸಕ ಸುನೀಲ್ ಕುಮಾರ್ ಅವರು ಆರೋಗ್ಯ ಸಚಿವ ಶ್ರೀ ರಾಮುಲು ಅವರಿಗೆ ಮನವಿ ಮಾಡಿದರು. ಈ ವಿಶೇಷ ಆಸ್ಪತ್ರೆಗಾಗಿ ಕಾಬೆಟ್ಟು ಭಾರತ್ ಬೀಡಿ ಕಾಲನಿ ಬಳಿ 2 ಎಕರೆ ಜಾಗ ಮೀಸಲಿಟ್ಟಿದೆ ಎಂದರು.
ಜಿಲ್ಲಾ ಪಂಚಾಯತ್ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಶುಭಕೋರಿದರು. ತಾಲೂಕು ಸರಕಾರಿ ಆಸ್ಪತ್ರೆಯ ಪ್ರಭಾರ ಮುಖ್ಯವೈದ್ಯಾಧಿಕಾರಿ ಡಾ.ಪಿ.ಕೆ.ಮಲ್ಯ, ತಾಲೂಕು ಸರಕಾರಿ ಆಸ್ಪತ್ರೆಯ ನೂತನ ಕಟ್ಟಡದ ಕಂಟ್ರಾಕ್ಟರ್ದಾರ ಯಶೀಶ್ ಕುಮಾರ್.ಕೆ. ಪ್ರಮುಖ ಶುಶ್ರೂಷಕಿ ಗೋಪಿ, ಸಿಬ್ಬಂದಿ ಸುಧಾಕರ ಇವರನ್ನು ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲ್ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.