ಉಡುಪಿ, ನ 12 (DaijiworldNews/SM): ವಿನಾಕಾರಣ ಉಡುಪಿಯ ಎಸ್.ಐ. ಅನಂತ ಪದ್ಮನಾಭ ಇವರನ್ನು ಸಸ್ಪೆಂಡ್ ಮಾಡಿರುವ ಎಸ್.ಪಿಯವರ ಕ್ರಮವನ್ನು ನಾನು ಖಂಡಿಸುತ್ತೇನೆ" ಎಂದು ಉಡುಪಿ ಶಾಸಕರಾದ ರಘುಪತಿ ಭಟ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಒಂದು ವಾರದ ಹಿಂದೆ ಅಜ್ಜರಕಾಡು ಪಾರ್ಕಿನಲ್ಲಿ ಒಬ್ಬ ಯುವಕ ಇನ್ನೊಂದು ಧರ್ಮದ ಯುವತಿಯೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಆ ಯುವಕನಿಗೆ ಸಣ್ಣ ಪ್ರಮಾಣದ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಎಸ್.ಐ. ಅವರು ಆ ಯುವಕನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಆದರೆ 5-6 ದಿನಗಳ ನಂತರ ಇತರರ ಕುಮ್ಮಕ್ಕಿನಿಂದ ಆ ಯುವಕ ತನ್ನ ಮೇಲೆ ಹಲ್ಲೆಯಾಗಿದೆ ಎಂದು ದೂರು ನೀಡಿದ್ದಾನೆ. ನಂತರ ಎಸ್.ಪಿಯವರು ಎಫ್.ಐ.ಆರ್. ಮಾಡಿದ್ದಾರೆ.
ಆದರೆ ಎಸ್.ಐ ಪದ್ಮನಾಭ ಅವರು ಮೇಲಾಧಿಕಾರಿಗಳಿಗೆ ಈ ಪ್ರಕರಣದ ಕುರಿತು ಸೂಕ್ತವಾದ ಮಾಹಿತಿ ನೀಡಿಲ್ಲ ಹಾಗೂ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದಲ್ಲಿ ನವಂಬರ್ 11ರಂದು ಎಸ್.ಐ ಅನಂತಪದ್ಮನಾಭ ಹಾಗೂ ಹೆಡ್ ಕಾನ್ಸಟೇಬಲ್ ಜೀವನ್ ಅವರನ್ನು ಅಮಾನತು ಮಾಡಿದ್ದಾರೆ. ಈ ವಿಷಯವನ್ನು ನಾನು ಗೃಹಮಂತ್ರಿ ಹಾಗೂ ಐ.ಜಿ.ಯವರಿಗೆ ತಿಳಿಸಿದ್ದೇನೆ. ತಕ್ಷಣವೆ ಅವರ ಮೇಲಿರುವ ಅಮಾನತು ಆದೇಶವನ್ನು ಹಿಂಪಡೆದು ಎಸ್.ಐ ಹಾಗು ಹೆಡ್ ಕಾನ್ಸಟೇಬಲ್ ಅವರನ್ನು ಉಡುಪಿಯಲ್ಲೇ ಸೇವೆಗೆ ನಿಯುಕ್ತಿ ಮಾಡುವಂತೆ ಆಗ್ರಹಿಸಿದರು.