ಬೆಳ್ತಂಗಡಿ, ನ 12 (DaijiworldNews/SM): ವೀಲ್ ನಾಮೆ ಹಾಗೂ ಸಾಮಾನ್ಯ ಜಿ.ಪಿ.ಎ. ಮೂಲಕವಾಗಿ ದಲಿತ ಜಮೀನನ್ನು ಕಬಳಿಸುವ ಕೃತ್ಯಗಳು ತಾಲೂಕಿನಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಆಗ್ರಹಿಸಲಾಯಿತು.
ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ರ್ತಿಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಸಂಜೀವ ಆರ್ ಇದೊಂದು ವ್ಯವಸ್ಥಿತ ದಾಳವಾಗಿದೆ. ತಾಲೂಕಿನಲ್ಲಿ ಇಂತಹ ಪ್ರಕರಣಗಳು ಸಾಕಷ್ಟು ಇದೆ ಎಂದು ಆರೋಪಿಸಿದರು. ಇದಕ್ಕೆ ಸಭೆಯಲ್ಲಿದ್ದ ಚಂದು ಎಲ್, ಬಿಕೆ ವಸಂತ ಹಾಗೂ ಇತರೆ ಹೆಚ್ಚಿನ ಸದಸ್ಯರು ಧ್ವನಿಗೂಡಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಧ್ವನಿಗೂಡಿಸಿ ಜಿ.ಪಂ. ಸದಸ್ಯ ಕೊರಗಪ್ಪ ಅವರು ತಾಲೂಕಿನ ಕಲ್ಲೇರಿಯಲ್ಲಿ ದಲಿತರ ಜಮೀನನ್ನು ಅತ್ಯಂತ ವ್ಯವಸ್ಥಿತವಾಗಿ ಕಬಳಿಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರರು ಇಂತಹ ಪ್ರಕರಣಗಳ ಬಗೆಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಹಾಗೂ ಬೆಳ್ತಂಗಡಿ ಸಬ್ ರಿಜಿಸ್ಟಾರ್ ಕಚೇರಿಗೆ ದಲಿತರ ಭೂಮಿಯ ಪರಾಬಾರೆಯ ಸಂದರ್ಭದಲ್ಲಿ ಸೂಕ್ತವಾದ ಕ್ರಮಗಳನ್ನು ವಹಿಸುವಂತೆ ಸೂಚಿಸುವದಾಗಿ ತಿಳಿಸಿದರು.
ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನು ನೀಡಿಕೆಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ಶೇಖರ ಲಾಯಿಲ ಗಮನ ಸೆಳೆದರು ಎಲ್ಲೆಡೆ ದಲಿತರಿಗೆ ಮೀಸಲಿರಿಸಲಾಗಿರುವ ಜಮೀನು ಅತಿಕ್ರಮಣವಾಗಿದೆ ಆದರೆ ಅದರ ತೆರವಿಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಡಿಸಿ ಮನ್ನಾ ಜಾಗ ವಿತರಣೆಗಾಗಿ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆಯಾದರೂ ಈ ವರೆಗೆ ಅದರ ಸಭೆಯೇ ನಡೆದಿಲ್ಲ. ದಲಿತರಿಗೆ ಜಾಗ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ ಆರೋಪಿಸಿದರು.