ಕಾರ್ಕಳ, ನ 13 (Daijiworld News/MSP): ತಾಲೂಕು ಪಂಚಾಯತ್ನಲ್ಲಿ ತೆರವುಗೊಂಡ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಮಧ್ಯಾಹ್ನ ಚುನಾವಣೆ ನಡೆದಿದ್ದು, ಮಾಳದಿಂದ ಚುನಾಯಿತರಾದ ಸೌಭಾಗ್ಯ ಮಡಿವಾಳ ಅಧ್ಯಕ್ಷರಾಗಿ, ಅಜೆಕಾರಿನಿಂದ ಚುನಾಯಿತರಾದ ಹರೀಶ್ ನಾಯಕ್ ಅವಿರೋಧ ಆಯ್ಕೆಯಾಗಿದ್ದಾರೆ.
ಒಟ್ಟು ೨೦ ಸ್ಥಾನಗಳಿದ್ದು, ಓರ್ವ ಕಾಂಗ್ರೆಸ್ ಸದಸ್ಯ ಹಾಗೂ 19 ಮಂದಿ ಬಿಜೆಪಿ ಸದಸ್ಯ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸೌಭಾಗ್ಯ ಮಡಿವಾಳ, ಉಪಾಧ್ಯಕ್ಷ ಸ್ಥಾನಕ್ಕೆ ಹರೀಶ್ ನಾಯಕ್ ಇವರು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಅವರಿಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು ಘೋಷಿಸಿದರು.
ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ. ಹರ್ಷ ಅವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರುಗಳು, ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು,ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಪುಷ್ಪ ಗುಚ್ಛ ನೀಡಿ, ಹಾರ ಹಾಕಿ, ಸಾಲು ಹೊದಿಸಿ ಗೌರವಿಸಿದರು.
ಶಾಸಕರ ನೇತೃತ್ವದಲ್ಲಿ ಇನ್ನಷ್ಟು ಅಭಿವೃದ್ಧಿ:
ಸ್ವಚ್ಚ ಕಾರ್ಕಳ, ಸುಂದರ ಕಾರ್ಕಳ ಘೋಷವಾಕ್ಯದೊಂದಿಗೆ ತಾಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಶಾಸಕ ವಿ.ಸುನೀಲ್ಕುಮಾರ್ ಹಾಕಿಕೊಂಡಿದ್ದಾರೆ. ಅವುಗಳು ಅನುಷ್ಠಾನಗೊಳ್ಳುತ್ತಿದ್ದು ಅದಕ್ಕೆ ತಾಲೂಕು ಪಂಚಾಯತ್ ಸಂಪೂರ್ಣ ಬೆಂಬಲಿಸಲಿದೆ. ಶಾಸಕರ ಮಾರ್ಗದರ್ಶನ ಸದಸ್ಯರುಗಳ ಸಹಕಾರದೊಂದಿಗೆ ತಾಲೂಕಿನ ಅಭಿವೃದ್ಧಿ ಕಾರ್ಯದಲ್ಲಿ ತೊಡಗುವುದಾಗಿ ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಮಡಿವಾಳ ಹೇಳಿದರು.