ಮಂಗಳೂರು, ನ 14 (Daijiworld News/MSP): ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವ ಮೂಲಕ, "ಫಲಿತಾಂಶದ ದಿನ ನ.14 ರಂದು ಕಾಂಗ್ರೆಸ್ ಕಣ್ಣೀರು ಸುರಿಸಲಿದೆ " ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ನ.8 ರಂದು ನುಡಿದಿರುವ ಭವಿಷ್ಯ ಅಕ್ಷರಶಃ ನಿಜವಾಗಿದೆ.
60 ವಾರ್ಡ್ ಗಳಲ್ಲಿ 44 ಸ್ಥಾನ ಪಡೆದ ಬಿಜೆಪಿ ಗೆದ್ದು ಬೀಗಿದ್ರೆ, ಕಳೆದ ಬಾರಿ 35 ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ 14 ಸ್ಥಾನಕ್ಕೆ ಕುಸಿತ ಕಂಡು ಹೀನಾಯವಾಗಿ ಸೋಲುಂಡಿದೆ. ಆರು ಸ್ಥಾನಗಳಿಗೆ ಸ್ಪರ್ಧಿಸಿದ್ದ ಎಸ್ ಡಿಪಿಐ ಪಕ್ಷ ಎರಡು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ನ. 8 ರಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ, "ಕಾಂಗ್ರೆಸ್ ಪಕ್ಷ ಅತ್ಯುತ್ತಮವಾದುದು, ಆದರೆ ಪಕ್ಷದ ನಾಯಕರುಗಳಿಗೆ ಹೇಗೆ ಮಾತನಾಡಬೇಕೆನ್ನುವುದೇ ತಿಳಿದಿಲ್ಲ ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಚುನಾವಣೆ ಗೆಲ್ಲುತ್ತದೆ ಮತ್ತು ನವೆಂಬರ್ 14 ನಿರ್ಣಾಯಕ ದಿನವಾದ್ದರಿಂದ ಕಾಂಗ್ರೆಸ್ ಅದರ ನೇರ ಪರಿಣಾಮಗಳನ್ನು ಎದುರಿಸಲಿದೆ ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಗಾಗಿ ನಡೆದ ಒಳಜಗಳ, ಸಮರ್ಥ ನಾಯಕತ್ವ ಕೊರತೆ ಈ ಎಲ್ಲಾ ಕಾರಣಗಳು ಪಾಲಿಕೆಯಲ್ಲಿ 5 ಬಾರಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ನ್ನು ಹೀನಾಯ ಸೋಲಿನತ್ತ ನೂಕಿತು ಎಂದರೂ ತಪ್ಪಾಗಲಾರದು.
ಇನ್ನೊಂದೆಡೆ ಕರಾವಳಿಯ ಸಂಸದ ನಳಿನ್ ಕುಮಾರ್ ಒಲಿದ ರಾಜ್ಯಾಧ್ಯಕ್ಷ ಸ್ಥಾನ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಉತ್ತರ ಶಾಸಕ ಭರತ್ ಶೆಟ್ಟಿ ಅವರಿಬ್ಬರು ಟೊಂಕಕಟ್ಟಿ ಪಕ್ಷದ ಗೆಲುವಿಗಾಗಿ ಶ್ರಮಿಸಿದ ರೀತಿ, ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಪೋಟಗೊಳ್ಳದಂತೆ ಹೊಸ ಮುಖ ಹಾಗೂ ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್, ಬಿಜೆಪಿಯ ಶಿಸ್ತುಬದ್ದ ಪ್ರಚಾರ, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯ ಪ್ರಚಾರ ಎಲ್ಲವೂ ಬಿಜೆಪಿಯ ಗೆಲುವಿಗೆ ವರವಾಗಿ ಪರಿಣಮಿಸಿ ನಿರೀಕ್ಷೆಗೂ ಮೀರಿದ ಗೆಲುವು ಪಡೆದುಕೊಳ್ಳುವಲ್ಲಿ ಸಫಲವಾಯಿತು.