ಕುಂದಾಪುರ, ನ. 15(DaijiworldNews/SM): ಅಂಬೇಡ್ಕರ್ ರಚಿಸಿದ ಸಂವಿಧಾನದ ಕೃಪೆಯಿಂದ ಪ್ರಧಾನಿಯಾದವರೇ ಇಂದು ಅವಮಾನಿಸುವ ಮೂಲಕ ತಾನೇರಿದ ಏಣಿಯನ್ನೇ ತುಳಿಯುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಅಕ್ಷಮ್ಯ. ಚಹಾ ಮಾರುತ್ತಿದ್ದವ ಪ್ರದಾನಿಯಾದರೆ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ ಎನ್ನುವುದನ್ನು ಮರೆತು ಈಗ ಅವರನ್ನು ಅವಮಾನಿಸುವ ಕೆಲಸಗಳಾಗುತ್ತಿವೆ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶುಕ್ರವಾರ ಇಲ್ಲಿನ ಶಾಸ್ತ್ರಿ ಸರ್ಕಲ್ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಗೆ ಅವಮಾನಿಸಿದ ಸರ್ಕಾರದ ವಿರುದ್ದದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವಮಾನಕಾರಿ ಮಾಹಿತಿ ಪ್ರಕಟಿಸಿದ ಶಿಕ್ಷಣ ಇಲಾಖೆ ಹಾಗೂ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಯಲ್ಲಿ ಸರಕಾರದ ಸುತ್ತೋಲೆಗೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
ಒಬ್ಬ ಅಂಬೇಡ್ಕರ್ ಅವರನ್ನು ಎದುರಿಸಲು ಮನುವಾದಿಗಳಿಂದ ಸಾಧ್ಯವಾಗಿಲ್ಲ. ಇನ್ನು ಅಂಬೇಡ್ಕರ್ ಅವರು ಬಯಸಿದಂತೆ ಶೋಷಿತ ಸಮುದಾಯದ ಎಲ್ಲರೂ ವಿದ್ಯಾವಂತರಾದರೆ ಸಹಿಸಿಕೊಳ್ಳುತ್ತಲೇ ಇರಲಿಲ್ಲ. ಸಮಾನತೆ, ಸಹೋದರತೆ, ಬಂಧುತ್ವದ ನೆಲೆಯಲ್ಲಿ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಪಾತ್ರವನ್ನು ಗೌಣವಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.