ಮಂಗಳೂರು, ನ. 15 (DaijiworldNews/SM): ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸುವ ಮೂಲಕ 12 ವರ್ಷಗಳ ಬಳಿಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮಂಗಳವಾರ ನಡೆದಿದ್ದ ಚುಣಾವಣಾ ಮತ ಎಣಿಕೆಯಲ್ಲಿ ೬೦ ವಾರ್ಡುಗಳಲ್ಲಿ ೪೪ ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸುವ ಮೂಲಕ ಸ್ಪಷ್ಟ ಜನಾದೇಶವನ್ನು ಪಡೆದುಕೊಂಡಿದೆ.
ಐದು ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಕೇವಲ 14 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದೆ. 2013ರ ಚುನಾವಣೆಯಲ್ಲಿ ಬಿಜೆಪಿ 20 ಹಾಗೂ ಕಾಂಗ್ರೆಸ್ 35 ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಬಾರಿ ಬಿಜೆಪಿ 24 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದಿದೆ. ಕಾಂಗ್ರೆಸ್ 21 ಸ್ಥಾನಗಳನ್ನು ಕಳಡೆದುಕೊಂಡಿದೆ. ಇನ್ನು ಈ ಬಾರಿ ಬಿಜೆಪಿಗೆ ಸ್ಪಷ್ಟ ಜನಾದೇಶ ಬಂದಿರುವುದರಿಂದ ಪಾಲಿಕೆಯಲ್ಲಿ ಅರ್ಹವಾಗಿಯೇ ಆಡಳಿತ ನಡೆಸುವ ಯೋಗ್ಯತೆ ಪಡೆದಿದ್ದು, ಪಾಲಿಕೆಯಲ್ಲಿ ಮೊದಲ ಮೇಯರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.
ಪಾಲಿಕೆಗೆ ಸದಸ್ಯ ಅಭ್ಯರ್ಥಿಗಳ ಮೀಸಲಾತಿ ಪ್ರಕಟಗೊಂಡ ಕೆಲವೇ ದಿನದಲ್ಲಿ ಮೇಯರ್ ಹಾಗೂ ಉಪಮೇಯರ್ ಮೀಸಲಾತಿಯನ್ನೂ ಸರಕಾರ ಪ್ರಕಟಿಸಿತ್ತು. ಇದರಂತೆ ಈ ಬಾರಿ ಮೇಯರ್ ಪದವಿ ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಹಿಂದಿನ ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಈ ಮೀಸಲಾತಿ ಪ್ರಕಟಗೊಂಡಿದ್ದು, ಇದೀಗ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಮೇಯರ್- ಉಪಮೇಯರ್ ಮೀಸಲಾತಿಯಲ್ಲಿ ಮತ್ತೆ ಬದಲಾವಣೆಯಾಗಿ ಹೊಸ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ. ಮೇಯರ್ ರೇಸ್ನಲ್ಲಿ ಸುಮಾರು ೧೦ ಕಾರ್ಪೋರೇಟರ್ಗಳು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದ್ದು, ಈ ಅವಧಿಯ ಮೊದಲ ಮೇಯರ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲು ಮನೆ ಮಾಡಿದೆ.