ಮಂಗಳೂರು, ನ.16(Daijiworld News/SS): ದೇವಸ್ಥಾನ ಸಂಪರ್ಕ ರಸ್ತೆಗೆ ಸಂಸದರ ಅನುದಾನದಲ್ಲಿ ಹೆಚ್ಚುವರಿಯಾಗಿ ಮಳೆಹಾನಿ ಹಾಗೂ ಇತರ ನಿಧಿಯಿಂದ ಹತ್ತು ಲಕ್ಷ ಅನುದಾನ ಬಿಡುಗಡೆಯಾಗಿದ್ದು, ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಉತ್ತಮ ರಸ್ತೆ ನಿರ್ಮಾಣ ಆಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿಯ 3.60 ಲಕ್ಷ ಅನುದಾನದಲ್ಲಿ ಹರೇಕಳ ಶ್ರೀ ಅರ್ಧನಾರೀಶ್ವರ ದೇವಸ್ಥಾನ-ಸಂಪಿಗೆದಡಿ ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸಗೈದು ಮಾತನಾಡಿದರು. ಸಂಪಿಗೆದಡಿ ರಸ್ತೆ ಹಿಂದಿನಿಂದಲೂ ಸಮಸ್ಯೆಗೆ ಕಾರಣವಾಗಿದ್ದು ಅಪಘಾತಗಳೂ ನಡೆದಿವೆ, ಈ ಹಿನ್ನೆಲೆಯಲ್ಲಿ ಕಾಂಕ್ರೀಟ್ ರಸ್ತೆಗೆ ಅನುದಾನ ನೀಡಲಾಗಿದ್ದು, ಕಾಮಗಾರಿಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಿಲ್ಲದೆ ಕಳಪೆಗೆ ಅವಕಾಶ ನೀಡದಂತೆ ಆಗಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ಸಂಪಿಗೆದಡಿಯಲ್ಲಿ ನಾಗಮಂಡಲ ಆದ ಬಳಿಕ ಅಭಿವೃದ್ಧಿ ಪರ್ವ ಆರಂಭಗೊಂಡಿದೆ. ದೇವಸ್ಥಾನಕ್ಕೆ ಶಿಲಾನ್ಯಾಸ ನಡೆದ ದಿನವೇ ರಸ್ತೆ ಕಾಮಗಾರಿಗೂ ಶಿಲಾನ್ಯಾಸ ನಡೆದಿದ್ದು, ಕಾಂಕ್ರೀಟ್ ರಸ್ತೆ ಶೀಘ್ರ ಜನರ ಉಪಯೋಗಕ್ಕೆ ಸಿಗಲಿದೆ ಎಂದು ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಬದ್ರುದ್ದೀನ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ಆಳ್ವ, ಪ್ರಧಾನ ಕಾರ್ಯದರ್ಶಿ ಸದಾಶಿವ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಬಿಜೆಪಿ ಮುಖಂಡರಾದ ಬಾಸ್ಕರ ರೈ ಸಂಪಿಗೆದಡಿ, ಜಯರಾಮ ಗಟ್ಟಿ ಬೈತಾರ್, ಬಾಸ್ಕರ್ ದೆಬ್ಬೇಲಿ, ಪ್ರಸಾಸ್ ಕಂಬಳಕೋಡಿ, ಸುರೇಶ್ ಶೆಟ್ಟಿ ಪಡ್ಯಾರಮನೆ, ಪ್ರವೀಣ್ ಕೋಟ್ಯಾನ್ ಸಂಪಿಗೆದಡಿ ಮೊದಲಾದವರು ಉಪಸ್ಥಿತರಿದ್ದರು.