ಮಂಗಳೂರು, ನ 16 (Daijiworld News/MSP): ನಗರದ ಪಂಪ್ ವೆಲ್ ಮೇಲ್ಸೇತುವೆಯ ಜನವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಅವರು ನ.16 ರ ಶನಿವಾರ ಪಂಪ್ ವೆಲ್ ಮೇಲ್ಸೇತುವೆಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದರು. ಮುಂದುವರಿಸಿ ಮಾತನಾಡಿದ ಅವರು "ಪಂಪ್ ವೆಲ್-ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಹಲವು ಕಾರಣಗಳಿಂದ ನವಯುಗ ಸಂಸ್ಥೆಯ ನಿಧಾನಗತಿಯಲ್ಲಿ ಮಾಡಿತು. ಈ ನಡುವೆ ಒತ್ತಡದ ಹಾಕಿದ ಪರಿಣಾಮ ತೊಕ್ಕೊಟ್ಟು ಪ್ಲೈಓವರ್ ಜನಸಂಚಾರಕ್ಕೆ ಲಭ್ಯವಾಯಿತು".
"ಅಂದು ಸಾರಿಗೆ ಸಚಿವರಾಗಿದ್ದ ಗಡ್ಕರಿ ಅವರ ಖಾಸಗಿ ಕಾಯದರ್ಶಿ ವೈಭವ್ ದಾಂಘೆ ಅವರೊಳಗೊಂಡ ಸಭೆಯಲ್ಲಿ ನಿರ್ಮಾಣದ ಹೊಣೆಹೊತ್ತ ನವಯುಗ ಸಂಸ್ಥೆಗೆ ಗಡುವು ನೀಡಲಾಗಿತ್ತು. ಮಾತ್ರವಲ್ಲದೆ ಅರ್ಥಿಕ ಸಂಕಷ್ಟಕ್ಕೀಡಾದ ನವಯುಗ ಸಂಸ್ಥೆಗೆ ಬ್ಯಾಂಕ್ 55 ಕೋಟಿ ಬಿಡುಗಡೆ ಮಾಡಿತ್ತು ಇದರೊಂದಿಗೆ ಕೇಂದ್ರ ಸರ್ಕಾರವೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿತ್ತು. ಇದೀಗ ನವಯುಗ ಸಂಸ್ಥೆ ಕಾಮಗಾರಿ ಪೂರ್ಣಗೊಳಿಸಿ ಮೇಲ್ಸೇತುವೆ ಡಿ. 21 ಕ್ಕೆ ಬಿಟ್ಟುಕೊಡಬೇಕು ಎಂದು ಅಂತಿಮ ಗಡುವು ವಿಧಿಸಲಾಗಿದೆ ಎಂದು ತಿಳಿಸಿದರು.
ಇದೆಲ್ಲದರ ಮಧ್ಯೆ ಇಂಡಿಯಾನ ಆಸ್ಪತ್ರೆ ಮತ್ತು ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ಮಧ್ಯೆ ಅಂಡರ್ ಪಾಸ್ ಬೇಕು ಎಂಬ ಬೇಡಿಕೆ ಇತ್ತು, ಕಳೆದ ವರ್ಷ ಇದಕ್ಕೆ ಅನುಮತಿ ದೊರಕಿ ಇದರ ಕಾಮಗಾರಿಯೂ ಪೂರ್ಣಗೊಂಡಿದೆ. ನ. 20 ರಿಂದ ಸರ್ವಿಸ್ ರಸ್ತೆಯ ಡಾಮರೀಕರಣ ಪ್ರಾರಂಭವಾಗಬೇಕು ಪಂಪೆ ವೆಲ್ ಪ್ಲೈ ಓವರ್ ಕಾಮಗಾರಿಯೂ ಶೀಘ್ರದಲ್ಲೇ ಪೂರ್ಣಗೊಂಡು ಜನವರಿ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು .
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಮಾಜಿ ಕಾರ್ಪೋರೇಟರ್ ಗಳಾದ ಆಶಾ ಡಿಸಿಲ್ವ, ವಿಜಯ ಕುಮಾರ್ ಶೆಟ್ಟಿ, ನಿಯೋಜಿತ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.