ಚಿಕ್ಕಮಗಳೂರು, ಜ 12: ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದು, ಹಲವರ ವಿರುದ್ಧ ದೂರು ದಾಖಲು ಮಾಡಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದ್ದಾರೆ.
ಎಸ್.ಪಿ ಕಛೇರಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ಧನ್ಯಶ್ರೀ ತಂದೆ ಯಾದವ್ ಅವರ ದಾರಿ ತಪ್ಪಿಸುವ ಕೆಲಸ ಸಂಘಟನೆಗಳು ಮಾಡಿದೆ. ನಮಗೆ ಹಿಂದೂ ಮುಸ್ಲಿಂ ಸಂಘಟನೆ ಮುಖ್ಯ ಅಲ್ಲ. ಎಲ್ಲರೂ ನನಗೆ ಒಂದೇ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಧನ್ಯಶ್ರೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಧನ್ಯಶ್ರೀ ಜೊತೆ ಚಾಟ್ ಮಾಡಿದ್ದು ಸಂತೋಷ್ ಅಲ್ಲ. ಬೇರೆ ಹೆಸರು ಬಳಸಿ ಧನ್ಯಶ್ರೀ ಜೊತೆ ವಾಟ್ಸಪ್ ನಲ್ಲಿ ಚಾಟ್ ಮಾಡಿದ್ದಾರೆ. ಯಾರು ಧನ್ಯಶ್ರೀ ಜೊತೆ ಮಾತನಾಡಿರುವುದು ಎಂದು ಈಗಾಗಲೇ ನಮಗೆ ತಿಳಿದಿದೆ. ವಾಟ್ಸಪ್ ನಲ್ಲಿ ಬೆದರಿಕೆ ನೀಡಿರುವ ಮತ್ತು ಸಂದೇಶ ರವಾನೆ ಮಾಡಿರುವ ನಾಲ್ಕು ಮಂದಿಯ ವಿರುದ್ಧವೂ ಎಫ್.ಐ.ಆರ್ ದಾಖಲು ಮಾಡುತ್ತೇವೆ ಎಂದು ತಿಳಿಸಿದ್ದಾರೆ.