ಉಡುಪಿ, ನ 17 (Daijiworld News/MB): ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಸೆಕ್ಯರಿಟಿ ಗಾರ್ಡ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಪರ್ಕಳ ಸಣ್ಣಕ್ಕಿ ಬೆಟ್ಟುವಿನ ದೀಪಕ್ ನಾಯಕ್ (22) ಆರೋಪಿಯು ಪ್ರಸ್ತುತ ಕೆನರಾ ಬ್ಯಾಂಕ್ ನ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೈಕ್ ನಲ್ಲಿ ತೆರಳಿ ವಿದ್ಯಾರತ್ನ ನಗರ ಪೆರಂಪಳ್ಳಿ ರಸ್ತೆ, ಈಶ್ವರ ನಗರ, ಪ್ರೆಸ್ ಕಾರ್ನರ್ ನಲ್ಲಿ ಒಂಟಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯನ್ನು ಡಿ ವೈ ಎಸ್ ಪಿ ಟಿ.ಆರ್ ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಮಣಿಪಾಲ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು ಬಂದಿಸಿದ್ದಾರೆ. ಎಸ್ ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ಕುಮಾರ್ ಚಂದ್ರ ಅವರ ನಿರ್ದೇಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಪೊಲೀಸರು ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಬೈಕನ್ನು ವಶಕ್ಕೆ ಪಡೆಸಿದ್ದಾರೆ. ಆರೋಪಿಯು ತಾನು ಲೈಂಗಿಕ ಕಿರುಕುಳ ನೀಡಿರುವುದಾಗಿ ಒಪ್ಪಿಕೊಂಡಿದ್ದು ನ್ಯಾಯಾಲಯಕ್ಕೆ ಹಾಜರು ಪಡೆಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.