ಮೂಡುಬಿದಿರೆ, ಜ 12: ಗಿರಿ ಸನಿಹ ಪುತ್ತಿಗೆ ವಿವೇಕಾನಂದ ನಗರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಂದಿನಿಂದ ಜ.14 ರವರೆಗೆ ಆಳ್ವಾಸ್ ವಿರಾಸತ್-2018 ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದೆ.
ಡಾ. ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ. ಆಚಾರ್ಯ ಆಳ್ವಾಸ್ ವಿರಾಸತ್-2018 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಹಿಂದೂಸ್ಥಾನಿ ಗಾಯಕರಾದ ಪದ್ಮಭೂಷಣ ರಾಜನ್ - ಸಾಜನ್ ಮಿಶ್ರಾ ಸಹೋದರರಿಗೆ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಮಯ ಪ್ರಜ್ಞೆ, ಶಿಸ್ತಿಗೆ ಆಳ್ವಾಸ್ ವಿರಾಸತ್ ಹೆಸರಾಗಿದೆ. ವಿದ್ಯಾರ್ಥಿ ಸ್ವಯಂ ದ್ದೀಪಾಲಂಕಾರ, ಅತ್ಯುತ್ತಮ ಬೆಳಕು - ಧ್ವನಿ ವ್ಯವಸ್ಥೆ ವಿರಾಸತ್ ಸಂಭ್ರಮಕ್ಕೆ ಮೆರುಗು ನೀಡಿದೆ. ವಿರಾಸತ್ ನಡೆಯುವ ವಿವೇಕಾನಂದ ನಗರವನ್ನು ಬಣ್ಣದ ಪೂಕರೆಗಳಿಂದ ಅಲಂಕೃತಗೊಳಿಸಲಾಗಿದೆ. ರಾಷ್ಟ್ರೀಯ ಚಿತ್ರ ಕಲಾವಿದರ ಶಿಬಿರವು ಆಳ್ವಾಸ್ ವರ್ಣ ವಿರಾಸತ್ - 2018ರಲ್ಲಿ ಎಕ್ರಿಲಿಕ್ ಮಾಧ್ಯಮದಲ್ಲಿ ಸಿದ್ಧವಾದ ಚಿತ್ರಗಳ ಸಹಿತ ಅಪರೂಪದ ಚಿತ್ರಗಳ ಪ್ರದರ್ಶನ ಏರ್ಪಡಿಸಿದ್ದು, ಚಿತ್ರ ಪ್ರಿಯರಿಗೆ ಮುದ ನೀಡಲಿದೆ.
ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿದ್ದು, 40 ಸಾವಿರಕ್ಕೂ ಹೆಚ್ಚು ಜನರು ಕುಳಿತು ನೋಡಬಹುದಾದ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯನ್ನು ಸಾಂಪ್ರದಾಯಿಕವಾಗಿ ಶೃಂಗರಿಸಿದ್ದಾರೆ. ಮೂರು ದಿನಗಳ ಕಾಲ ವೈಭವದಿಂದ ಆಳ್ವಾಸ್ ವಿರಾಸತ್ – 2018 ನಡೆಯಲಿದೆ.