ಮಂಗಳೂರು, ನ.18(Daijiworld News/SS): ಯುವ ಸಮುದಾಯ ದಾರಿ ತಪ್ಪುತ್ತಿರುವುದರಿಂದ ಸಮಾಜ, ಊರಿನ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ ಎಂದು ವಳಚ್ಚಿಲ್ ಕೇಂದ್ರ ಜುಮಾ ಮಸೀದಿಯ ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಅಭಿಪ್ರಾಯಪಟ್ಟರು.
ಇನೋಳಿ ಬಿ’ಸೈಟ್ ಹಿದಾಯತುಲ್ ಇಸ್ಲಾಂ ಮದರಸ ವತಿಯಿಂದ ನಡೆದ ಧಾರ್ಮಿಕ ಸಭೆಯಲ್ಲಿ ‘ದಾರಿ ತಪ್ಪುತ್ತಿರುವ ಯುವಸಮುದಾಯ’ ಎನ್ನುವ ವಿಚಾರದಲ್ಲಿ ಅವರು ಉಪನ್ಯಾಸ ನೀಡಿದರು. ಯುವ ಸಮುದಾಯ ದಾರಿತಪ್ಪಿ, ಆದರಿಂದ ಸಮಾಜಕ್ಕೆ ನಷ್ಟ ಆಗುತ್ತಿರುವುದಕ್ಕೆ ಪರಿಹಾರ ನೀಡಲು ಯಾವುದೇ ವಿಜ್ಞಾನಿಗಳಿಂದ ಸಾಧ್ಯವಿಲ್ಲ. ಇಂದು ಮನುಷ್ಯ ಸತ್ಯ ಹೇಳುವುದನ್ನೇ ಮರೆತಿದ್ದಾನೆ. ಸುಳ್ಳನ್ನು ಸತ್ಯವನ್ನಾಗಿಸುವ ಏಕೈಕ ಉದ್ದೇಶದಿಂದಲೇ ದೇವನ ಮೇಲೆ ಆಣೆ-ಪ್ರಮಾಣ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಇನೋಳಿ ಎ’ಸೈಟ್ ಹಿದಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಅಬ್ದುಲ್ ಹಮೀದ್ ಅಝ್ಹರಿ, ಆಧುನಿಕ ಯುಗದ ತಂತ್ರಜ್ಞಾನದ ಪರಿಣಾಮ ಯುವ ಸಮುದಾಯ ಮಾದಕ ವ್ಯಸನದ ದಾಸರಾಗಿ ದಾರಿ ತಪ್ಪುವಂತಾಗಿದೆ. ಧರ್ಮದ ಹೆಸರಲ್ಲಿ ಉಗ್ರವಾದದತ್ತ ವಾಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾದಿ(ಸ) ಜೀವನ ಮಾದರಿ ಬಗ್ಗೆ ಅಧ್ಯಯನ ನಡೆಸಿ ಅದರಂತೆ ನಡೆಯಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಖತೀಬ್ ಯು.ಕೆ.ಅಬೂಬಕ್ಕರ್ ಮದನಿ, ಅಬ್ದುಲ್ ಜಬ್ಬಾರ್ ದಾರಿಮಿ, ಅಧ್ಯಕ್ಷ ಅಬ್ದುಲ್ ಖಾದರ್ ಕೆಳಗಿನಕೆರೆ, ಪ್ರಧಾನ ಕಾರ್ಯಕದರ್ಶಿ ಟಿ.ಎಚ್.ಅಬ್ಬಾಸ್, ಜತೆಕಾರ್ಯದರ್ಶಿ ಅಕ್ರಮ್ ಇನೋಳಿ, ಇನೋಳಿ ಬಿ’ಸೈಟ್ ಹಿದಾಯತುಲ್ ಇಸ್ಲಾಂ ಮದರಸದ ಪ್ರಾಧ್ಯಾಪಕ ಅಶ್ರಫ್ ಮುಸ್ಲಿಯಾರ್, ಅಧ್ಯಕ್ಷ ಟಿ.ಎಚ್.ನಝೀರ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಉಂಞ ದಿಡಿಂಜ, ಇನೋಳಿ ಮೊದಲಾದವರು ಉಪಸ್ಥಿತರಿದ್ದರು. ಮಸ್ಜಿದುರಹ್ಮಾನ್ ಪ್ರಧಾನ ಕಾರ್ಯದರ್ಶಿ ಹುಸೈನ್ ಬಾವು ಸ್ವಾಗತಿಸಿದರು. ಇನೋಳಿ ಮಸೀದಿಯ ಮುಅದ್ದಿನ್ ಅಹ್ಮದ್ ಕುಂಞಿ ಮುಸ್ಲಿಯಾರ್ ಕಿರಾಅತ್ ಪಠಿಸಿದರು.