ಮಂಗಳೂರು, ಜ 12: ಕರಾವಳಿಯ ಗಂಡುಕಲೆ ಯಕ್ಷಗಾನದ ಪ್ರಸಂಗವೊಂದರಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡಲಾಗಿದ್ದು, ಅತ್ಯಂತ ಕೀಳಾಗಿ, ಹಾಸ್ಯಸ್ಪದವಾಗಿ ಮುಸ್ಲಿಮರನ್ನು ಕಾಣಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಯಕ್ಷಗಾನದ ಪ್ರಸಂಗವೊಂದರಲ್ಲಿ ಮುಸ್ಲಿಂ ಪಾತ್ರಧಾರಿ ಮತ್ತು ಮತ್ತೊಬ್ಬ ಕಲಾವಿದನ ನಡುವಿನ ಸಂಭಾಷಣೆಯಲ್ಲಿ ಬಂದ ಹಾಸ್ಯದ ಮಾತುಗಳನ್ನು ಇಡೀ ಮುಸ್ಲಿಂ ಸಮುದಾಯಕ್ಕೆ ಆದ ಅವಮಾನವೆಂದು ಬಿಂಬಿಸಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ತುಣುಕು ವೈರಲ್ ಮಾಡಲಾಗಿದೆ. ಉಡುಪಿಯ ಸಾಲಿಗ್ರಾಮ ಗುರುಪ್ರಸಾಧಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಪ್ರಸಂಗ ಇದಾಗಿದ್ದು, ಎಲ್ಲಿ- ಯಾವಾಗ ಪ್ರದರ್ಶಿಸಲಾಯಿತು ಎಂಬುದರ ಬಗ್ಗೆ ಉಲ್ಲೇಖವಿಲ್ಲ.
ಇದೀಗ ಮುಸ್ಲಿಂ ವಾಟ್ಸಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋ ಭಾರೀ ವೈರಲ್ ಆಗಿದ್ದು, ಈ ಯಕ್ಷಗಾನ ಪ್ರಸಂಗವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಯಕ್ಷಗಾನ ಪ್ರಸಂಗದಲ್ಲಿ ಹಾಸ್ಯ ಪಾತ್ರ ಮಾಡಿರುವ ಕಲಾವಿದರನ್ನು ಬೀದಿ ಹೆಣ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಬಹಿರಂಗವಾಗಿ ವಾಟ್ಸಪ್ ಗ್ರೂಪ್ ಗಳಲ್ಲಿ ಬೆದರಿಕೆ ಹಾಕುತ್ತಿರುವುದರಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ.