ಕಾರ್ಕಳ, ನ 18 (DaijiworldNews/SM): ಕಾರ್ಕಳ ಕ್ಷೇತ್ರದ ಸರ್ವಾಗೀಣ ಅಭಿವೃದ್ಧಿಗೆ ಸರಕಾರದಿಂದ ಎಲ್ಲ ರೀತಿಯಲ್ಲಿ ನೆರವು ನೀಡುವಲ್ಲಿ ರಾಜ್ಯ ಸರಕಾರ ಕಟಿಬದ್ಧವಾಗಿದೆ. ಕಾರ್ಕಳ ತಾಲೂಕು ಒಳಾಂಗಣ ಕ್ರೀಡಾಂಗಣಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಶ್ರಮಿಸುತ್ತೇನೆ ಎಂದು ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ದೇವರಾಜ ಅರಸು ಭವನ ಉದ್ಘಾಟನೆ, ಮಂದಿರದ ಆವರಣದಲ್ಲಿ ಗಣ್ಯ ವ್ಯಕ್ತಿಗಳ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಕಾರ್ಕಳ ತಾಲೂಕು ಕ್ರಿಡಾಂಗಣದಲ್ಲಿ ನಿರ್ಮಿಸಲಾದ ಈಜುಕೊಳ, ವಿಕಾಸ ವಿವಿದ್ಧೋದ್ಧೇಶ ಸೌಹಾರ್ದ ಸಹಕಾರಿ(ನಿ) ಕಾರ್ಕಳ, ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ) ಶಿವಮೊಗ್ಗ ಸಂಯುಕ್ತ ಆಶ್ರಯದಲ್ಲಿ ವಿಕಾಸ ಸ್ತ್ರೀಧನ್ ಇವುಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈಜು ಸೇರಿದಂತೆ ಇತರ ಕ್ರೀಡೆಗಳು ಮಾನವನ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುವ ಕಾರ್ಯ ನಡೆಸುತ್ತದೆ. ಬಾಲ್ಯದಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು. ಅದಕ್ಕೆ ಹೆತ್ತವರ ಪ್ರೋತ್ಸಾಹ ನಿರಂತರವಾಗಿರಬೇಕು ಎಂದರು.
ಇನ್ನು ಸರಕಾರದ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ೧.೬೪ ಕೋಟಿ ರೂ. ವೆಚ್ಚದಲ್ಲಿ ಈ ಈಜುಕೊಳ ನಿರ್ಮಾಣವಾಗಿದೆ. ಮಲೆನಾಡು ಅಭಿವೃದ್ದಿ ನಿಧಿ, ಕ್ರೀಡಾಕೂಟದ ಯೋಜನೆಗಳು ಹಾಗೂ ಶಾಸಕರ ನಿಧಿಯನ್ನು ಬಳಕೆ ಮಾಡಲಾಗಿದೆ. ಪ್ರಸ್ತುತ ಒಳ ಕ್ರೀಡಾಂಗಣ ನಿರ್ಮಾಣದ ಯೋಜನೆ ನಮ್ಮ ಮುಂದಿದ್ದು, ೩.೫೦ ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳ್ಳಲಿದೆ ಎಂದರು.