ಕೊಚ್ಚಿ, ಜ 12: ಯುವತಿಯೊಬ್ಬಳನ್ನು ಪ್ರೀತಿಸಿ, ವಿವಾಹವಾಗಿ ನಂತರ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ಐಸಿಸ್ ಉಗ್ರರಿಗೆ ಮಾರಾಟ ಮಾಡಲು ಯತ್ನಿಸಿದ ಘಟನೆಯೊಂದು ನಡೆದಿದೆ.
ಯುವತಿ ಕೇರಳದ ಪತ್ತನಂತಿಟ್ಟ ಮೂಲದ ಅಕ್ಷರಾ ಬೋಸ್(24)ಎಂದು ತಿಳಿದುಬಂದಿದೆ. ಬೆಂಗಳೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದ ವೇಳೆ ಈಕೆಗೆ ಮೊಹಮ್ಮದ್ ರಿಯಾಜ್ (26) ಎಂಬಾತನ ಪರಿಚಯವಾಗಿತ್ತು.
ಮೊಹಮ್ಮದ್ ರಿಯಾಜ್ ಯುವತಿಯ ಜೊತೆ ದೈಹಿಕ ಸಂಬಂಧ ನಡೆಸಿ, ನಂತರ ಆತ ಆಕೆಗೆ ತಿಳಿಯದಂತೆ ವೀಡಿಯೋ ತೆಗೆದು ಯುವತಿಗೆ ಹೆದರಿಸುತ್ತಿದ್ದ. ಮಾತ್ರವಲ್ಲದೆ ಯುವತಿಯನ್ನು ಕೇರಳದಲ್ಲಿರುವ ಉತ್ತರ ಪರವೂರಿಗೆ ಕರೆದೊಕೊಂಡು ಹೋಗಿ ಬಲವಂತವಾಗಿ ಮದ್ರಸಾವೊಂದಕ್ಕೆ ಸೇರಿಸಿ ಕುರಾನ್ ಕಲಿಯುವಂತೆ ಒತ್ತಾಯಿಸುತ್ತಿದ್ದ. ನಂತರ ಬಲವಂತವಾಗಿ ಮತಾಂತರ ಮಾಡಿ, ಮೌಲ್ವಿಯೊಬ್ಬರ ಸಮ್ಮುಖದಲ್ಲಿ ವಿವಾಹವಾಗಿದ್ದಾನೆ.
ಯುವತಿ ಮೊಹಮ್ಮದ್ ರಿಯಾಜ್ ಕಾಟವನ್ನು ತಡೆಯಲಾಗದೇ, ಗಂಡನ ಕೈಯಿಂದ ತಪ್ಪಿಸಿಕೊಂಡು ಪೋಷಕರ ಮನೆಗೆ ಮರಳಿ ಬಂದಿದ್ದಳು. ಆದರೆ ಮತ್ತೇ ಮೊಹಮ್ಮದ್ ರಿಯಾಜ್ ಆಕೆಯನ್ನು 2017ರ ಆಗಸ್ಟ್ನಲ್ಲಿ ಸೌದಿ ಅರೇಬಿಯಾಗೆ ಕರೆದೊಕೊಂಡು ಹೋಗಿದ್ದ. ನಂತರ ಐಸಿಸ್ ಉಗ್ರರಿಗೆ ತನ್ನನ್ನು ಮಾರಾಟ ಮಾಡಲು ಪತಿ, ಇತರರೊಂದಿಗೆ ಸೇರಿ ಮಾತುಕತೆ ನಡೆಸುತ್ತಿದ್ದ ವಿಚಾರವೂ ಯುವತಿಗೆ ಗೊತ್ತಾಗಿದ್ದು, ಅಕ್ಷರಾ ಬೋಸ್ ಕೇರಳ ಹೈಕೋರ್ಟ್ನಲ್ಲಿ ಎನ್ಐಎ ತನಿಖೆ ಮತ್ತು ಮದುವೆಯ ರದ್ದತಿಗಾಗಿ ಅರ್ಜಿ ಸಲ್ಲಿಸಿದ್ದಾಳೆ.
ಈ ಪ್ರಕರಣದ ಸಂಬಂಧ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದು, ಸೌದಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಬಂಧಿಸಲಾಗಿರುವ ಫವಾಜ್ ಜಮಾಲ್, ಮೊಹಮ್ಮದ್ ಸಯೀದ್ ವಿರುದ್ಧ ಕೇಸು ದಾಖಲಿಸಲಾಗಿದೆ.