ಕುಂದಾಪುರ, ನ 19 (Daijiworld News/MSP): ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡ್ನಹಿತ್ಲು ಶ್ರೀ ರಮಾನಂದ ಶೆಟ್ಟಿಗಾರ್ ಮನೆಯ ಹಿತ್ತಲಿನಲ್ಲಿ ಲಿಂಗ ಮುದ್ರೆ ಕಲ್ಲು ಪತ್ತೆಯಾಗಿದೆ.
ಬಸ್ರೂರಿನ ರಮಾನಂದ ಶೆಟ್ಟಿಗಾರ್ ಮನೆ ಬಳಿ ಇರುವ ಲಿಂಗ ಮುದ್ರೆಕಲ್ಲು
ಕಂದಾವರದಲ್ಲಿ ಕಾಣಸಿಕ್ಕ ಲಿಂಗ ಮುದ್ರೆಕಲ್ಲು
ನೇರಳಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಸ್ವಲ್ಪ ದೂರದಲ್ಲಿ ಕಾಣಲ್ಪಟ್ಟ ವಾಮನ ಮುದ್ರೆ ಕಲ್ಲು
ಶೈವ ಹಾಗೂ ವೈಷ್ಣವರ ಆರಾಧನೆಗೆ ಸಂಬಂಧಿಸಿದ ಹಾಗೂ ಅವರ ಆರಾಧನೆಗೆ ಗಡಿಗಳನ್ನು ಗುರುತಿಸುವುದು ಸಹಜ .ಆ ಮೂಲಕ ಶೈವರು ಶಿವನನ್ನು ,ವೈಷ್ಣವರು ವಿಷ್ಣುವನ್ನು ಆರಾಧಿಸಿ ಕೊಂಡು ಬಂದಿರುವುದು. ಶೈವರ ಗಡಿಗಳಿಗೆ ಲಿಂಗ ಮುದ್ರೆ ಕಲ್ಲು (ಶೈವ ಮುದ್ರೆ ಕಲ್ಲು) ಹಾಗೂ ವೈಷ್ಣವರ ಗಡಿಗಳಿಗೆ ವಾಮನ ಮುದ್ರೆ ಕಲ್ಲುಗಳು ಹಾಕುತ್ತಿದ್ದರು.ಆ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು.
ಈ ಪ್ರದೇಶದ ಅಣತಿ ದೂರದಲ್ಲಿ ಇತಿಹಾಸ ಪ್ರಸಿದ್ಧವಾದ ಶ್ರೀ ತುಳುವೇಶ್ವರ ದೇವಾಲಯ ಕೂಡಾ ಇದ್ದು, ಮೂಡ್ನಹಿತ್ಲು ಎಂಬ ಪ್ರದೇಶದ ಶ್ರೀ ರಮಾನಂದ ಶೆಟ್ಟಿಗಾರ ಮನೆಯ ಹಿತ್ತಲಿನಲ್ಲಿ ಕಾಣಸಿಗುವ ಲಿಂಗ ಮುದ್ರೆ ಕಲ್ಲಿನಲ್ಲಿ ಶಿವಲಿಂಗ, ಸೂರ್ಯ, ಚಂದ್ರ ಹಾಗೂ ಕೆಳ ಭಾಗವೂ ಅಸ್ಪಷ್ಟದಂತೆ ಕಾಣಲ್ಪಟ್ಟರೂ ನಂದಿ ವಿಗ್ರಹ ನಂತಿದೆ. ಈ ಹಿಂದೆಯೂ ಸಹಾ ಈ ರೀತಿಯ ಕಲ್ಲುಗಳನ್ನು ಪ್ರದೀಪ ಕುಮಾರ್ ಬಸ್ರೂರು ಕಂದಾವರ ಪ್ರದೇಶದಲ್ಲಿ ಶಾಸನ ಪತ್ತೆ ಹಚ್ಚಿದ ಅಣತಿ ದೂರದಲ್ಲಿ ಲಿಂಗ ಮುದ್ರೆ ಕಲ್ಲುಗಳು ಇದ್ದು ಇದು ಶೈವರ ಆರಾಧನೆಯ ಬಗ್ಗೆ ಬಹಳ ಸ್ಪಷ್ಟವಾಗಿ ತಿಳಿಸುತ್ತದೆ.
ವಾಮನ ಮುದ್ರೆ ಕಲ್ಲುಗಳನ್ನು ನೋಡುವುದಾದರೆ ನೇರಳಕಟ್ಟೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಸ್ಪಲ್ಪ ದೂರ ಬಾವಿ ಕಟ್ಟೆಯ ಪಕ್ಕದಲ್ಲಿ ಇರುವುದು ಕಂಡುಬಂದಿದೆ.ಬಸ್ರೂರು ಮೂಡುಕೇರಿಯ ಇತಿಹಾಸ ಪ್ರಸಿದ್ದ ಶ್ರೀ ಆದಿನಾಥೇಶ್ವರ ದೇವಾಲಯದ ಸ್ವಲ್ಪ ದೂರ ಕನರಾಡಿ ವಾದಿರಾಜ್ ಭಟ್ಟರು ಮನೆ ಬಳಿ ಲಿಂಗ ಮುದ್ರೆ ಕಲ್ಲುಗಳು ಪತ್ತೆಯಾಗಿದ್ದು ಬಹಳ ಸ್ಪಷ್ಟವಾಗಿ ಶೈವರ ಆರಾಧನಾ ಪ್ರದೇಶವನ್ನು ತಿಳಿಸುತ್ತದೆ.ಲಿಂಗಮುದ್ರೆ ಕಲ್ಲನ್ನು ಶ್ರೀ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದು ಇವರಿಗೆ ಶ್ರೀ ಶಶಿಕಾಂತ್ ಎಸ್.ಕೆ ಇವರು ಸಹಕರಿಸಿರುತ್ತಾರೆ.
ಬಸ್ರೂರಿನ ಶ್ರೀ ತುಳುವೇಶ್ವರ ದೇವಾಲಯ ಮಹೇಶ್ ಕಿಣಿ ಅವರ ಪ್ರಕಾರ " ಪ್ರಾಚೀನ ಸಂಸ್ಕೃತಿಯ ತವರೂರಾದ ವಸುಪುರ ಇಂದಿನ ಬಸ್ರೂರು ಶೈವ ಸಂಪ್ರದಾಯದ ಪ್ರಮುಖ ಆರಾಧನಾ ಕೇಂದ್ರವಾಗಿತ್ತು ಎಂಬುದುಕ್ಕೆ ಸಾಕ್ಷಿ ಎಂಬಂತೆ ಇಂದು ಮತ್ತೊಂದು ಲಿಂಗ ಮುದ್ರೆ ಕಲ್ಲು ಬಸ್ರೂರಿನ ಅತ್ಯಂತ ಪ್ರಾಚೀನ ಶ್ರೀ ತುಳುವೇಶ್ವರ ದೇವಾಲಯದ ಅಣತಿ ದೂರದಲ್ಲಿ ದೊರೆತಿರುವುದು ಶೈವ ಮತ ಪಂಗಡದ ಆಚರಣೆ ಹಾಗೂ ಅದರ ಹಿಡಿತವನ್ನು ಗೋಚರಿಸುತ್ತದೆ.ಈ ತರಹದ ಅನೇಕ ಲಿಂಗ ಮುದ್ರಿಕೆ ಹಾಗೂ ಶಾಸನಗಳು ಬಸ್ರೂರಿನ ಪರಿಸರದಲ್ಲಿ ಅನೇಕ ಕಾಣಸಿಗುತ್ತದೆ. ಇನ್ನಷ್ಟು ಸಂಶೋಧನೆ ಹಾಗೂ ಅಧ್ಯಯನದಿಂದ ಬಸ್ರೂರಿನ ಪ್ರಾಚೀನ ಹಾಗೂ ವಿಶಿಷ್ಟವಾದ ಇತಿಹಾಸದ ಮಗ್ಗಲುಗಳು ಇಂದಿನ ತಲೆಮಾರಿಗೆ ಅನಾವರಣಗೊಳ್ಳ ಬೇಕಾಗಿದೆ" ಎನ್ನುತ್ತಾರೆ