ಉಡುಪಿ, ನ 19 (DaijiworldNews/SM): ಗೋ ರಕ್ಷಣೆ ಮತ್ತು ಗಂಗಾ ಶುದ್ದೀಕರಣದಿಂದ ಗೋವಿನ ಅನುಗ್ರಹ ಸಿಗುತ್ತದೆ. ಹಿಂದೂ ಧರ್ಮದ ಪವಿತ್ರ ಆರಾಧನೆ ನಡೆಸಲ್ಪಡುವ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾನ್ಯ ಮಾಡಬೇಕೆಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಂಗಾ ನದಿ ದೇಶದ ಪವಿತ್ರ ನದಿಯಾಗಿದ್ದು, ಇದರಲ್ಲಿ ಶುದ್ಧ ನೀರು ಹರಿಯುತ್ತಿತ್ತು. ಆದರೆ, ಇಂದು ಗಂಗಾ ನದಿ ಸಂಪೂರ್ಣ ಕಲುಷಿತಗೊಂಡಿದೆ. ಗಂಗಾಜಲ ಶುದ್ದೀಕರಣ ನಮ್ಮ ದೇಶದ ದುರಂತವಾಗಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಗಂಗಾ ನದಿ ಶುದ್ಧಗೊಳ್ಳಬೇಕಾದರೆ ಮೊದಲಿಗೆ ಕಾರ್ಖಾನೆಗಳಿಂದ ಬರುವ ತ್ಯಾಜ್ಯ ನೀರನ್ನು ನಿಲ್ಲಿಸಬೇಕೆಂದರು.
ಇನ್ನು ಯೋಗ ಮತ್ತು ಆಯುರ್ವೇದ ಭಾರತ ದೇಶದ ಕೊಡುಗೆಯಾಗಿದೆ. ಈ ಎರಡು ಪದ್ಧತಿಗಳು ಪುರಾತನ ಕಾಲದಿಂದಲೂ ಜಾರಿಯಲ್ಲಿತ್ತು. ಇದು ಜಾತ್ಯಾತೀತವಾದುದು. ಹಿಂದು ಸಂಸ್ಕೃತಿಯ ರಕ್ಷಣೆಗಾಗಿ ಸಂತರು ಹಾಗೂ ಸಮಾಜ ಭಾಂದವರು ಸಾರಥಿಗಳಾಗಬೇಕು ಎಂದು ಪೇಜಾವರ ಸ್ವಾಮೀಜಿ ಕರೆ ನೀಡಿದ್ದಾರೆ.
ನಮ್ಮ ರಾಷ್ಟ್ರ ರೋಗ ಮುಕ್ತ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಆಗಬೇಕೆಂಬ ಆಶಯವನ್ನು ಅವರು ವ್ಯಕ್ತ ಪಡಿಸಿದರು.