ಪುತ್ತೂರು, ನ 20 (Daijiworld News/MSP): ಕುರಿಯಾದಲ್ಲಿ ನಡೆದಿದ್ದ ಅಜ್ಜ - ಮೊಮ್ಮಗಳ ಡಬ್ಬರ್ ಮರ್ಡರ್ ಪ್ರಕರಣ ಆರೋಪಿಯನ್ನು 24 ಗಂಟೆಗಳಲ್ಲಿ, ಬಂಧಿಸುವಲ್ಲಿ ದಕ್ಷಿಣ ಕನ್ನಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂಖಾನ್ (29) ಎಂದು ಗುರುತಿಸಲಾಗಿದೆ. ಕಳ್ಳತನದ ಉದ್ದೇಶದಿಂದ ಕೃತ್ಯ ನಡೆದ ಮನೆಯ ಗೋಡೆ ಮತ್ತು ಹಂಚಿನ ನಡುವೆ ನುಸುಳಿ ಒಳ ಪ್ರವೇಶಿಸಿದ್ದು ಕಳ್ಳತನ ನಡೆಸುವ ವೇಳೆ ಮನೆಯ ಸದಸ್ಯರು ಎಚ್ಚರಗೊಂಡ ಕಾರಣ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ, ಕರೀಂಖಾನ್ ಮೊದಲೇ ಮನೆಯ ಸದಸ್ಯರಿಗೆ ಪರಿಚಿತನಾಗಿದ್ದು, ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಅಡುಗೆ ಕೋಣೆಯಲ್ಲಿದ್ದ ಕೊಕ್ಕೆ ಕತ್ತಿಯಿಂದ ಶೇಕ್ ಕೊಗ್ಗು ಸಾಹೇಬ್ ( 70 ವರ್ಷ), ಶಾಮಿಯಾ ಭಾನು (16 ವರ್ಷ) ಖತೀಜಾಬಿ (65 ವರ್ಷ) ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಇದಲ್ಲದೆ ಮೃತ ಶೇಕ್ ಕೊಗ್ಗು ಸಾಹೇಬ್ ರವರೊಂದಿಗೆ ಕರೀಂ ಖಾನ್ ಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಮನಸ್ತಾಪವಿತ್ತು ಎಂದು ತಿಳಿದುಬಂದಿದೆ. ಈ ವೇಳೆ ಗಂಭೀರ ಗಾಯಗಳಾಗಿ ಶೇಕ್ ಕೊಗ್ಗು ಸಾಹೇಬ್, ಶಾಮಿಯಾ ಭಾನು ಮೃತಪಟ್ಟರೆ, ಖತೀಜಾಬಿ ಮೇಲೂ ಮಾರಣಾಂತಿಕ ಹಲ್ಲೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆ ಬಳಿಕ ಆರೋಪಿ ಕರೀಂಖಾನ್ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,000 ನಗದನ್ನು ಕಳ್ಳತನ ನಡೆಸಿ ಪರಾರಿಯಾಗಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಕುರಿಯ ಗ್ರಾಮದ ಬೀಟ್ ಸಿಬ್ಬಂದಿ ಭೀಮ್ ಶೇನ್ ರವರು ನೀಡಿದ ಸುಳಿವಿನ ಅಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಕೈಗೆ ಕೃತ್ಯ ನಡೆಸುವ ವೇಳೆ ಉಂಟಾದ ಘರ್ಷಣೆಯಲ್ಲಿ ಗಾಯವಾಗಿದ್ದು ಆತನಿಗೆ ಚಿಕಿತ್ಸೆ ನೀಡಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.