ಕುಂದಾಪುರ, ನ 21 (Daijiworld News/MSP): ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮರಳುಗಾರಿಕಾ ಸಮಸ್ಯೆ, ಸಂಬಂಧಪಟ್ಟ ಅಧಿಕಾರಿಗಳ ವಿಳಂಬ ನೀತಿಗೆ ಬೇಸೆತ್ತ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡ ವಿದ್ಯಮಾನ ನ.20ರಂದು ಕುಂದಾಪುರ ತಾ.ಪಂ.ನಲ್ಲಿ ನಡೆಯಿತು.
ಈ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶಾಸಕ ಹಾಲಾಡಿ ಅಧಿಕಾರಿಗಳ ವಿಳಂಬ ಧೋರಣೆಗೆ ತೀವ್ರ ಬೇಸರ ವ್ಯಕ್ತ ಪಡಿಸಿದರು. ಬಾಕಿ ಇರುವ ಮರಳು ದಿಬ್ಬಗಳ ತೆರವಿಗೆ ಏಕೆ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. ಕೂಡಲೇ ಹಳೆಯ ಮರಳುನೀತಿಯಲ್ಲಿ ಶಾರ್ಟ್ ಟೆಂಡರ್ ಕರೆದು ಮರಳುಗಾರಿಕೆ ಆರಂಭಿಸಲು ಸೂಚಿಸಿದ್ದರೂ ಕೂಡಾ ನೀವು ಇನ್ನೂ ಕೂಡಾ ಕಾರ್ಯಗತಗೊಳಿಸಿಲ್ಲ. ಇನ್ನು ಎಷ್ಟು ಕಡೆ ನಾನ್ ಸಿಆರ್ಜೆಡ್ನಲ್ಲಿ ಟೆಂಡರ್ಗೆ ಬಾಕಿ ಇದೆ ಎಂದು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಅಂಜನೇಯಪ್ಪ, ಶಂಕರನಾರಾಯಣ ಮತ್ತು ಮೊಳಹಳ್ಳಿಯಲ್ಲಿ ಟೆಂಡರ್ಗೆ ಬಾಕಿ ಇದೆ. ಈ ಬಗ್ಗೆ ಇವತ್ತೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮರಳು ಸಮಿತಿಯಲ್ಲಿ ಮಾತನಾಡುತ್ತೇನೆ ಎಂದರು.
ನವಯುಗ ಕಂಪೆನಿಯವರಿಗೆ ಮರಳು ಕಾಯ್ದಿದಿರಿಸಿದ್ದು ಏಕೆ? ಅವರು ಕೆಲಸ ಪ್ರಾರಂಭ ಮಾಡಿಲ್ಲ. ಮತ್ತೆ ಅವರಿಗೆ ಮರಳು ಏಕೆ? ಅದನ್ನು ಸಾರ್ವಜನಿಕ ಬಳಕೆಗೆ ತಗೆಯಲು ಅವಕಾಶ ಕೊಡಬಹುದಲ್ಲ ಎಂದು ಶಾಸಕರು ಪ್ರಶ್ನಿಸಿದರು. ಈಗ ತಗೆಯುತ್ತಿರುವ ಮರಳು ಯಾವ ಬೆಲೆಗೆ ಸರಬರಾಜು ಮಾಡುತ್ತಿದ್ದಿರಿ ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಅಧಿಕಾರಿಗಳು ನಾನ್ ಸಿಆರ್ಜೆಡ್ನಲ್ಲಿ 10 ಮೆಟ್ರಿಕ್ ಟನ್ಗೆ 6500, ಸಿಆರ್ಜೆಡ್ನಲ್ಲಿ 5500ಕ್ಕೆ ನೀಡಲಾಗುತ್ತಿದ್ದು, ಜಿಲ್ಲಾ ಮರಳು ಸಮಿತಿಯ ನಿಗದಿಸಿದ ದರದಲ್ಲಿಯೇ ಮಾರಾಟ ಮಾಡಲಾಗುತ್ತಿದೆ ಎಂದರು. ಗುಲ್ವಾಡಿ, ಕಾವ್ರಾಡಿ, ಬಳ್ಕೂರು ವ್ಯಾಪ್ತಿಯಲ್ಲಿ 11 ಎಕ್ರೆ 90 ಸೆಂಟ್ಸ್ ಜಾಗದಲ್ಲಿ, ಹಳ್ನಾಡು, ಜಪ್ತಿ ಗ್ರಾಮ ವ್ಯಾಪ್ತಿಯಲ್ಲಿ 5.70ಎಕ್ರೆ ಜಾಗದಲ್ಲಿ ಮರಳು ತಗೆಯಲಾಗುತ್ತಿದೆ ಎಂದರು.
ಮರಳನ್ನು ಲಾರಿಗೆ ಲೋಡ್ ಮಾಡುವ ಚಾರ್ಜನ್ನು ಯಾರು ನೀಡಬೇಕಾಗುತ್ತದೆ. ಈ ಚಾರ್ಜನ್ನು ಬೇಕಾಬಿಟ್ಟಿ ತಗೆದುಕೊಳ್ಳುವ ಹಾಗಿಲ್ಲ. ಈ ಬಗ್ಗೆಯೂ ದರ ನಿಗದಿಗೊಳಿಸಬೇಕು. ಸಾಧ್ಯವಾದರೆ ಯಾರ್ಡ್ನಿಂದಲೇ ಲೋಡ್ ಮಾಡುವ ಕ್ರಮ ಮಾಡಿ ಎಂದು ಶಾಸಕರು ಹೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಬಜೆಯಲ್ಲಿ ಇದೇ ರೀತಿ ಕ್ರಮ ಇದ್ದು ಇಲ್ಲಿಯೂ ಕೂಡಾ ಅಂತೆಯೇ ಮಾಡಲು ಜಿಲ್ಲಾ ಮರಳು ಸಮಿತಿಯ ಮುಂದೆ ಈ ವಿಷಯ ಇಡಲಾಗುವುದು ಎಂದರು.
ಹೊಳೆಯಲ್ಲಿ ನೀರಿನ ಹರಿಯು ಕಡಿಮೆಯಾದಂತೆ ಇನ್ನೂ ಕೂಡಾ ಮರಳು ದಿಬ್ಬಗಳು ಕಾಣಿಸಿಕೊಳ್ಳುತ್ತದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ಲಭ್ಯವಾಗಬೇಕು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಶ್ಯಾಮಲ ಎಸ್.ಕುಂದರ್, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ|ನಾಗಭೂಷಣ ಉಡುಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಾದೇವಪ್ಪ, ಹಾಗೂ ಶಂಕರ ಅಂಕದಕಟ್ಟೆ, ಸದಾನಂದ ಬಳ್ಕೂರು ಉಪಸ್ಥಿತರಿದ್ದರು.