ಬೆಂಗಳೂರು, ನ 21 (Daijiworld News/MSP): ಮಂಗಳೂರು ಗ್ರಾಮಾಂತರ ವಲಯದ ಆಟೋರಿಕ್ಷಾಗಳು ತುರ್ತು ಸಂದರ್ಭದಲ್ಲಿ ನಗರ ವಲಯಕ್ಕೆ ಪ್ರವೇಶಿಸಿದರೆ ದಂಡ ವಿಧಿಸದಂತೆ ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ.
ಮಂಗಳೂರು ಗ್ರಾಮಾಂತರದ ಆಟೋ ರಿಕ್ಷಾಗಳು ನಗರಕ್ಕೆ ಬಂದರೆ ದಂಡ ವಿಧಿಸುತ್ತಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ಆರ್ಟಿಓಗೆ ಈ ನಿರ್ದೇಶನ ನೀಡಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಆಟೋ ಚಾಲಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಆಟೋ ಚಾಲಕರು ಆರ್ಟಿಓ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಟೋ ಚಾಲಕರಿಗೆ ದಂಡ ವಿಧಿಸದಂತೆ ಜಿಲ್ಲಾಧಿಕಾರಿಗಳು ಆರ್ಟಿಓಗೆ ಆದೇಶಿದ್ದರು.
ಮಂಗಳೂರು ಗ್ರಾಮಾಂತರ ಹಾಗೂ ನಗರ ವ್ಯಾಪ್ತಿಯನ್ನು ಕ್ರಮವಾಗಿ ವಲಯ 1 ಮತ್ತು ವಲಯ 2 ಎಂದು ಗುರುತಿಸಿ 2006ರ ಜನವರಿ 23ರಂದು ಅಧಿಸೂಚನೆ ಹೊರಡಿಸಲಾಗಿತ್ತು.