ಉಡುಪಿ, ನ 21 (DaijiworldNews/SM): ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಹೊರ ರಾಜ್ಯದ ವಲಸೆ ಕಾರ್ಮಿಕ ಕುಟುಂಬಗಳು ಅಪಾಯದ ಸ್ಥಿತಿಯಲ್ಲಿ ಟರ್ಪಾಲು ಜೋಪಡಿ ಕಟ್ಟಿಕೊಂಡು ನಾಗರಿಕ ಸಮಾಜದಲ್ಲಿ ಅಸಹಾಯಕವಾಗಿ ಬದುಕು ಸಾಗಿಸುತ್ತಿದ್ದಾರೆ.
ಇಲ್ಲಿರುವ 6 ಕುಟುಂಬಗಳಲ್ಲಿ 30ಕ್ಕೂ ಅಧಿಕ ಸಣ್ಣ ಮಕ್ಕಳು ಇರುವುದನ್ನು ಗುರುತಿಸಲಾಗಿದೆ. ಮಕ್ಕಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತೀರುವುದು, ಆಟ ಆಡುತ್ತಿರುವುದು ಕಂಡು ಬಂದಿದೆ. ಇಲ್ಲಿ ವಾಹನ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಕಂಡು ಬಂದಿವೆ.
ರಾತ್ರಿಯ ಸಮಯದಲ್ಲಿ ಘನ ವಾಹನ ಚಾಲಕರು ನಿದ್ದೆಯ ಮಂಪರಿನಲ್ಲಿ ಹೆಚ್ಚಾಗಿ ಇರುತ್ತಾರೆ. ಚಾಲಕರ ಚಾಲನೆ ವೇಳೆಯಲ್ಲಿ ನಿಯಂತ್ರಣ ತಪ್ಪಿದಲ್ಲಿ ಜೋಪಡಿಗಳ ಮೇಲೆ ವಾಹನ ಸಂಚರಿಸಿ, ಸಾವು ನೋವು ಸಂಭವಿಸುವ ಸಾಧ್ಯತೆಗಳಿವೆ. ನಗರಾಡಳಿತ, ಜಿಲ್ಲಾಡಳಿತ ತಕ್ಷಣ ರಾಷ್ಟ್ರೀಯ ಹೆದ್ದಾರಿ ಪಕ್ಕ ನೆಲೆಕಂಡಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪದಾಧಿಕಾರಿಗಳು ಆಗ್ರಹಿಸುತ್ತಿದ್ದಾರೆ.
ಇನ್ನು ಹೆದ್ದಾರಿಯಲ್ಲಿ ನೆಲೆ ಕಂಡಿರುವ ಕುಟುಂಬಗಳು ಶೌಚಾದಿ ಕ್ರಿಯೆಗಳಿಗೆ ಬಯಲನ್ನು ಆಶ್ರಯಸಿಕೊಂಡಿವೆ. ಇಲ್ಲಿ ಮಾರಕ ಕಾಯಿಲೆಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಕುಟುಂಬಗಳು ಕೊಳಚೆ ಪ್ರದೇಶದಲ್ಲಿ ವಾಸಿಸುತ್ತೀರುವುದರಿಂದ ಡೆಂಗ್ಯೊ, ಮಲೇರಿಯಾ ಮುಂತಾದ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯು ಇದೆ. ಈ ಹಿಂದೆಯು ಈ ಸ್ಥಳದಲ್ಲಿ ವಲಸೆ ಕಾರ್ಮಿಕ ಹೊರ ಜಿಲ್ಲೆಯ ಕುಟುಂಬಗಳು ವಾಸಿಸುತ್ತಿದ್ದವು.
ಜಿಲ್ಲಾಡಳಿತ ನೀಡಿದ ಆದೇಶದ ಮೆರೆಗೆ ಮಕ್ಕಳ ರಕ್ಷಣಾ ಘಟಕವು ಎರಡು ಕುಟುಂಬವನ್ನು ಸ್ಥಳಾಂತಿರಿಸಿತ್ತು. ಮತ್ತೊಂದು ಕುಟುಂಬವನ್ನು ನಾಗರಿಕ ಸಮಿತಿಯ ನೆರವಿನ ಮೂಲಕ ಅವರ ಊರಿಗೆ ಕಳಿಸುವ ವ್ಯವಸ್ಥೆ ಮಾಡಿತ್ತು. ಅದೇ ಸ್ಥಳದಲ್ಲಿ ಇದೀಗ ಮತ್ತೆ ಹೊರರಾಜ್ಯದ ವಲಸೆ ಕುಟುಂಬಗಳು ನೆಲೆ ಕಂಡಿವೆ. ಪರಿಣಾಮ ಇದೀಗ ಈ ಸ್ಥಳ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಕ್ರಮವಾಗಿ ನೆಲೆಸಲು ಅವಕಾಶ ನೀಡಬಾರದು ಎಂಬ ಆಗ್ರಹ ಕೇಳಿಬಂದಿವೆ. ವಲೆಸಿಗರು ರಾಜಸ್ಥಾನ ರಾಜ್ಯದ ಜೈಪುರ ಜೆಲ್ಲೆಯವರೆಂದು ತಿಳಿದು ಬಂದಿದೆ.
ಶಾಲೆಗೆ ಹೋಗ ಬೇಕಾದ 6 ವರ್ಷದಿಂದ 12 ವರ್ಷದವರಿಗಿನ 20 ಮಕ್ಕಳು ಇಲ್ಲಿದ್ದಾರೆ. ಎಲ್ಲ ಮಕ್ಕಳು ಶಾಲೆಯ ಮೆಟ್ಟಿಲು ಹತ್ತದೆ, ಶಾಲೆಯಿಂದ ಹೊರಗುಳಿದಿದ್ದು, ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.